ಸಾರಾಂಶ
ಶರಣರ ವೇಷಧಾರಿ ಮಕ್ಕಳಿದ್ದ ತೆರೆದ ವಾಹನದ ಮೇಲೆ ಮಕ್ಕಳಿಂದ ವಚನಗಳ ನೃತ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಸವ ಜಯಂತಿ ನಿಮಿತ್ತ ಮಹಾತ್ಮಾ ಬಸವೇಶ್ವರರು ನಡೆದಾಡಿದ ಪುಣ್ಯ ಭೂಮಿ ಬಸವಕಲ್ಯಾಣದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8ಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಅಲಂಕೃತಗೊಂಡ ಬಸವೇಶ್ವರರ ಪಲ್ಲಕ್ಕಿ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.
ಮೆರವಣಿಗೆಯು ಐತಿಹಾಸಿಕ ಪರುಷ ಕಟ್ಟೆ, ಐತಿಹಾಸಿಕ ಚಾಲುಕ್ಯರ ಕೋಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿತು.ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಂಡಿದ್ದರು. ಜಾನಪದ ಕಲಾ ತಂಡಗಳಾದ ಮಹಿಳಾ ಡೊಳ್ಳು, ಲಂಬಾಣಿ ನೃತ್ಯ, ಬ್ಯಾಂಡ್, ಕುದರೆ ಮೇಲೆ ಕುಳಿತಿರುವ ಬಸವೇಶ್ವರ ವೇಷಧಾರಿ, ಅಕ್ಕಮಹಾದೇವಿ ವೇಷಧಾರಿ ಇನ್ನುಳಿದ ಶರಣರ ವೇಷಧಾರಿಗಳ ವಾಹನಗಳ ಮೆರವಣಿಗೆ ಗಮನ ಸೆಳೆಯುವಂತಿತ್ತು.
ಶರಣರ ವೇಷಧಾರಿ ಮಕ್ಕಳಿದ್ದ ತೆರೆದ ವಾಹನದ ಮೇಲೆ ಮಕ್ಕಳಿಂದ ವಚನಗಳ ನೃತ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಇಲ್ಲಿನ ನಗರಸಭೆ ಕಚೇರಿ ಕಟ್ಟಡದ ಹತ್ತಿರ ಬಂದಾಗ ನಗರಸಭೆಯ ಆಯುಕ್ತರು ರಾಜು, ಮಾಜಿ ಎಂಎಲ್‌ಸಿ ವಿಜಯಸಿಂಗ್, ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಅಭಿಯಂತರರಾದ ಶಿವಶರಣಪ್ಪ ಸಜ್ಜನಶೆಟ್ಟಿ ಅವರುಗಳು ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು.