ಬಸವಣ್ಣನಿಂದ ಮಹಿಳೆಯರಿಗೆ ಸಮಾನತೆ

| Published : May 20 2024, 01:31 AM IST

ಸಾರಾಂಶ

ಹೊಂಬೇಗೌಡ ನಗರದ ಬಾಲಕರ ಪ್ರೌಢಶಾಲೆಯಲ್ಲಿ ಬಸವ ಬಿಲ್ವ ಭಕ್ತರ ಬಳಗದಿಂದ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಸಮಾನತೆ, ಧಾರ್ಮಿಕ ಹಕ್ಕು ಹಾಗೂ ಸ್ವಾತಂತ್ರ್ಯ ನೀಡಿದ್ದು ಕಾಯಕಯೋಗಿ ಬಸವೇಶ್ವರರು ಎಂದು ಚಿಕ್ಕಮಗಳೂರು ಬಸವ ಕೇಂದ್ರದ ಶಿವಯೋಗಿ ಪ್ರಭುಗಳು ಬಣ್ಣಿಸಿದ್ದಾರೆ.

ಹೊಂಬೇಗೌಡ ನಗರದ ಬಾಲಕರ ಪ್ರೌಢಶಾಲೆಯಲ್ಲಿ ಬಸವ ಬಿಲ್ವ ಭಕ್ತರ ಬಳಗದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯರನ್ನು ಹಿಂದೆ ಸಮಾಜದಲ್ಲಿ ಕಡೆಗಣಿಸಿ ನೋಡಲಾಗುತ್ತಿತ್ತು. ಅದರೆ ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವಣ್ಣನವರು ಸಮಾನತೆ, ಧಾರ್ಮಿಕ ಹಕ್ಕು, ಸ್ವಾತಂತ್ರ್ಯ ನೀಡಿದರು. ಶೋಷಿತರು, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಜಗತ್ತನ್ನು ಉದ್ಧರಿಸಲು ಬಂದ ಮಹಾನ್ ಶಕ್ತಿ ಅಣ್ಣ ಬಸವಣ್ಣನವರು. ಬಸವಾದಿ ಶರಣರ ತತ್ತ್ವ, ಸಿದ್ಧಾಂತ ಅಳವಡಿಸಿಕೊಂಡರೆ ಅದೇ ಅನುಭವ ಮಂಟಪವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವಚನಜ್ಯೋತಿ ಬಳಗದಿಂದ ವಚನಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಉದಯ್ ಗರುಡಾಚಾರ್, ಮೇದಿನಿ ಗರುಡಾಚಾರ್, ವೀರಶೈವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಭಾಗ್ಯವತಿ ಅಮರೇಶ್, ಬಸವ ಬಿಲ್ವ ಬಳಗದ ಅಧ್ಯಕ್ಷ ಎಚ್.ಚಂದ್ರಶೇಖರ್, ಗೌರವಾಧ್ಯಕ್ಷ ಬಿ.ಸಿ.ಸದಾಶಿವಯ್ಯ ಹಾಜರಿದ್ದರು.