ಸಾರಾಂಶ
ಗಜೇಂದ್ರಗಡ: ವಚನ ಸಾಹಿತ್ಯದಿಂದ ಜ್ಞಾನ ಹೆಚ್ಚಾಗುತ್ತದೆ, ಬಸವ ಪುರಾಣ ಹಚ್ಚುವುದರಿಂದ ಭಕ್ತಿ ಹೆಚ್ಚಾಗುತ್ತದೆ. ಬಸವ ಪುರಾಣ ಕೇಳಲು ಜಾತಿ ಹಾಗೂ ಪಕ್ಷ ತಲೆಯಲ್ಲಿಟ್ಟುಕೊಂಡು ಬರಬೇಡಿ ಎಂದು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಹಾಲಕೆರೆ-ಗಜೇಂದ್ರಗಡ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಸಂಜೆ ಬಸವ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಭಕ್ತಿಯನ್ನು ಹೆಚ್ಚಿಸಲು ಉತ್ತರದಲ್ಲಿ ಭಾಗವತ, ದಕ್ಷಿಣದಲ್ಲಿ ಬಸವ ಪುರಾಣ ಹಚ್ಚಲಾಗುತ್ತದೆ ವಚನ ಸಾಹಿತ್ಯ ಹಚ್ಚುವದರಿಂದ ಜ್ಞಾನ ಹೆಚ್ಚಾಗುತ್ತದೆ, ಬಸವ ಪುರಾಣ ಹಚ್ಚುವದರಿಂದ ಭಕ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ಭಕ್ತಿ, ಜ್ಞಾನ ಹಾಗೂ ವೈರಾಗ್ಯ ಮುಖ್ಯವಾದದ್ದು. ಸಮಗ್ರ ಕ್ರಾಂತಿಯಾದ ಬಸವ ಪುರಾಣದಿಂದ ಗಜೇಂದ್ರಗಡದಲ್ಲಿ ಭಕ್ತಿ ಕ್ರಾಂತಿ ಹೆಚ್ಚಿಸಲಿ. ವಚನ ಸಾಹಿತ್ಯದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಭಕ್ತಿ ಹಾಗೂ ಜ್ಞಾನಗಳ ಪರಿಣಾಮ ತಮಗೆಲ್ಲ ವೈರಾಗ್ಯ ಬಂದೆ ತಿರುತ್ತದೆ ಎಂದರು.
ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕವಾಗಿ ಹಿಂದುಳಿಯುತ್ತಿರುವ ಹಾಗೂ ಗೊಂದಲಗಳಲ್ಲಿ ಮುಳುಗಿರುವದಕ್ಕೆ ಮಾನವ ಜನಾಂಗದಲ್ಲಿ ಪರಿಣಾಮಕಾರಿ ಪ್ರಭಾವ ಬೀರುವುದು ಧರ್ಮವಾಗಿದೆ. ದೇಶದಲ್ಲಿ ರಕ್ತ ಸಂಬಂಧಕಿಂತ ಗಟ್ಟಿಯಾದದ್ದು ಎಂದರೆ ಧರ್ಮ ಸಂಬಂಧವಾಗಿದೆ ಎಂದು ಅವರು, ಧಾರ್ಮಿಕವಾಗಿ ಹಿಂದುಳಿಯುತ್ತಿರುವ, ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಗೆ ಬೆಳಕು ನೀಡುವುದು ಬಸವ ಪುರಾಣದ ಉದ್ದೇಶವಾಗಿದೆ. ಮಠವು ಯಾವುದೇ ರಾಜಕೀಯಕ್ಕೆ ಅಂಟಿಕೊಂಡಿಲ್ಲ. ಹಾಲಕೆರೆ ಮಠ ರಾಜಕೀಯವಾಗಿ ಯಾವಾಗಲೂ ಬಂದಿಲ್ಲ. ನಂಬಿ, ವಿಶ್ವಾಸದಿಂದ ಭಕ್ತರು ನಮ್ಮಜ್ಜ ಅಂತಾರೆ ನಾವು ಎಲ್ಲರ ಕಡೆ ಬರುತ್ತೇವೆ. ಯಾರು ನೀ ನಮ್ಮಜ್ಜ ಅಲ್ಲ ಅಂತಾರೆ ನಾವು ಮುಂದಿನ ಊರಿಗೆ ಹೋಗಿ ಬಿಡುತ್ತೇವೆ ಎಂದರು.ಪ್ರವಚನಕಾರ ಗೂಡುರಿನ ಅನ್ನದಾನ ಶಾಸ್ತ್ರಿ ಮಾತನಾಡಿ, ಬಸವಣ್ಣನವರನ್ನು ಎಲ್ಲರನ್ನು ಜಾತ್ಯಾತೀತವಾಗಿ ಅಪ್ಪಿಕೊಂಡಿದ್ದರು. ಅವರ ವಿಚಾರಧಾರೆಗಳನ್ನು ಮನೆ, ಮನೆಗೆ ತಲುಪಿಸಲು ಹಾಲಕೆರೆಯ ಅನ್ನದಾನ ಸಂಸ್ಥಾನಮಠವು ೮ ಕಾಂಡ, ೬೦ ಸಂದಿ, ೩೬೨೮ ಪದಗಳನ್ನು ಒಳಗೊಂಡ ಮಹಾಪುರಾಣ ಬಸವ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ನಾವು ಹೇಗೆ ಬಾಳಬೇಕು ಎಂದು ಪ್ರವಚನ ಮೂಲಕ ನಮಗೆ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀಗಳು ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಶಿಕ್ಷಣದ ಮಹತ್ವ, ಸಮಾಜಕ್ಕೆ ಸಂಸ್ಕಾರ ಹಾಗೂ ಸಮುದಾಯಗಳಲ್ಲಿ ಸೌಹಾರ್ದತೆಯ ಕೊಂಡಿ ಬೆಸೆಯುವ ಕಾಯಕಕ್ಕೆ ಮಠವು ಸಾಕ್ಷಿಯಾಗಿ ನಿಂತಿದೆ. ಸಂಚಾರಿ ಬಸವ ಪುರಾಣ, ಉಳವಿಗೆ ೩೦೦ ಚಕ್ಕಡಿಗಳ ಮೂಲಕ ತೆರಳಿದ್ದನ್ನು ಸ್ಮರಿಸಿಕೊಂಡ ಶಾಸಕರು, ಗಜೇಂದ್ರಗಡದಲ್ಲಿ ೧೮ ಮಠ, ೧೮ ಬಾವಿ ಹಾಗೂ ೧೮ ಮಸೀದಿ ಹೊಂದಿದ ಇತಿಹಾಸ ಹೊಂದಿರುವ ಭಾವೈಕ್ಯ ನಗರಿಯಾಗಿದೆ. ಇಂತಹ ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ಯಶಸ್ವಿಗೊಳಿಸುವ ಜವಾಬ್ದಾರಿ ಇಲ್ಲಿನ ಭಕ್ತ ಸಮೂಹದ ಮೇಲಿದೆ ಎಂದರು.ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಟಿವ್ಹಿ, ಮೊಬೈಲ್ ಮಾಧ್ಯಮಕ್ಕೆ ಸಮುದಾಯಗಳು ಅಂಟಿಕೊಂಡಿದ್ದು, ಆಚಾರ, ವಿಚಾರ ಮರೆತಿದ್ದಾರೆ. ಸರಿ ದಾರಿಯತ್ತ ಜೀವನ ಸಾಗಿಸಲು ಹಾಗೂ ಸಮಸಮಾಜ ನಿರ್ಮಾಣ ಹಾಗೂ ಸೌಹಾರ್ದತೆ ಕೊಂಡಿ ಗಟ್ಟಿಯಾಗಲಿ ಎನ್ನುವದಕ್ಕೆ ಬಸವ ಪುರಾಣವು ಅವಶ್ಯಕವಾಗಿದೆ ಎಂದರು.
ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ದರೂರು ಸಂಗನಬಸವೇಶ್ವರ ಮಠದ ಕೊಟ್ಟರು ಸ್ವಾಮೀಜಿ, ಹೊಸೂರು-ಜಿಗೇರಿಯ ಗುರು ಸಿದ್ಧೇಶ್ವರ ಶಿವಾಚಾರ್ಯ, ಗರಗನಾಗಲಾಪೂರ ಒಪ್ಪತೇಶ್ವರ ಸಂಸ್ಥಾನಮಠದ ನಿರಂಜನ ಪ್ರಭು ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟರು ದೇಶಿಕರು, ಸಂಗನಾಳ ವಿಶ್ವೇಶ್ವರ ದೇವರು ಇದ್ದರು.ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಶರಣಪ್ಪ ರೇವಡಿ, ಬಿ.ಎಂ. ಸಜ್ಜನ, ಅಮರಯ್ಯ ಗೌರಿಮಠ, ಎಚ್.ಎಸ್. ಸೋಂಪುರ, ಶರಣಪ್ಪ ಕಂಬಳಿ, ವೀರಣ್ಣ ಶೆಟ್ಟರ್, ಅಮರೇಶ ಗಾಣಿಗೇರ, ಎಂ.ವೈ. ಅವಧೂತ, ರಾಜು ಸಾಂಗ್ಲೀಕರ, ಪ್ರಭು ಚವಡಿ, ಸಿದ್ದಪ್ಪ ಚೋಳಿನ ಸೇರಿ ಅನೇಕರು ಇದ್ದರು.