ಕನ್ನಡಪ್ರಭ ವಾರ್ತೆ ಬೆಳಗಾವಿ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಗುರುತಿಸಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಬಸವ ಪರಿಷತ್‌ನಿಂದ 2026ರ ಪ್ರತಿಷ್ಠಿತ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಗುರುತಿಸಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಬಸವ ಪರಿಷತ್‌ನಿಂದ 2026ರ ಪ್ರತಿಷ್ಠಿತ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾರ್ವಜನಿಕ ಜೀವನದಲ್ಲಿ ಮೂರು ದಶಕಗಳಿಂದ ಸಕ್ರಿಯರಾಗಿರುವ ಕವಟಗಿಮಠ ಅವರು ಶಿಕ್ಷಣ ಕ್ಷೇತ್ರದ ಪ್ರಗತಿ, ಸಹಕಾರ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಟಗಿಮಠ, ಬಸವಣ್ಣನವರು ಸಮಾನತೆಯ ಹರಿಕಾರರು. ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಮಹಾನ್ ಚೇತನ. ಅವರ ಹೆಸರಿನಲ್ಲಿ ನೀಡುವ ಬಸವ ಪುರಸ್ಕಾರ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕೆಎಲ್‌ಇ ಶಿಕ್ಷಣ ಸಂಸ್ಥೆ, ದೂಧಗಂಗಾ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಹಾಗೂ ವಿಧಾನ ಪರಿಷತ್ ಸದಸ್ಯನಾಗಿ ಸಲ್ಲಿಸಿದ ಸೇವೆಗೆ ದೊರೆತ ಈ ಗೌರವವನ್ನು ಕೆಎಲ್‌ಇ ಸಂಸ್ಥೆಯನ್ನು ಕಟ್ಟಿಬೆಳೆಸಿದ ಹಿರಿಯರು, ದಾನಿಗಳು ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.

21ನೇ ಶತಮಾನದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳ ಮೂಲಕ ಕೆಎಲ್‌ಇ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಿ ಭವಿಷ್ಯದ ಪೀಳಿಗೆಗೆ ದಾರಿದೀಪವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ ತಂದೆ-ತಾಯಿ, ಪತ್ನಿ, ಸಹೋದರರು ಹಾಗೂ ಮಾರ್ಗದರ್ಶಕರನ್ನು ಸ್ಮರಿಸಿ, ಬಸವ ಪುರಸ್ಕಾರ ನೀಡಿದ ಬಸವಾಭಿಮಾನಿಗಳು ಹಾಗೂ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹಾಂತೇಶ ಕವಟಗಿಮಠ ಅವರು ಶಿಕ್ಷಣ, ಸಹಕಾರ, ಉದ್ಯಮ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ. ಕೆಎಲ್‌ಇ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಸಹಕಾರ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಗಮನಾರ್ಹ ಎಂದರು.ಸಾಧಕರಿಗೆ ಪುರಸ್ಕಾರ

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಮಹಾಂತೇಶ ಕವಟಗಿಮಠ, ನಟ ಡಾ.ಶಿವರಾಜಕುಮಾರ್, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವೆ ಲೀಲಾದೇವಿ ಪ್ರಸಾದ್, ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಎಂ.ಪ್ರಶಾಂತ, ಉದ್ಯಮಿ ಡಾ.ಮಹೇಶ ಬೆಲ್ಲದ, ಸಹಕಾರಿ ಧುರೀಣ ಭೀಮರಾವ ಪಾಟೀಲ, ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಶಿಕ್ಷಣ ತಜ್ಞ ಎ.ಎಸ್.ಪಾಟೀಲ ಸೇರಿ ಹಲವು ಸಾಧಕರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಪರಿಷತ್ತಿನ ಗೌರವಾಧ್ಯಕ್ಷೆ ಎಂ.ಸಿ.ಉಮಾದೇವಿ, ಅಧ್ಯಕ್ಷೆ ರೇಖಾ ಮಹಾಂತೇಶ ಹಿರೇಮಠ ಸೇರಿ ಹಲವರು ಉಪಸ್ಥಿತರಿದ್ದರು.