ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ: ಬಸವ ರಥಕ್ಕೆ ಚಾಲನೆ

| Published : Jan 22 2025, 12:30 AM IST

ಸಾರಾಂಶ

ಬೀದರ್‌ನ ಗಣೇಶ ಮೈದಾನದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥ ಬಸವ ರಥ ಸಂಚಾರಕ್ಕೆ ಮಠಾಧೀಶರು ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಸೇಂಡನಲ್ಲಿ ಜ.29 ರಿಂದ ಫೆ.6ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥ ಬಸವ ರಥ ಸಂಚಾರಕ್ಕೆ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆಯಿತು.ಗಣೇಶ ಮೈದಾನದಲ್ಲಿ ಜಿಲ್ಲೆಯ ಮಠಾಧೀಶರು ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿಸಿ, ರಥಕ್ಕೆ ಚಾಲನೆ ನೀಡಿದರು.ಬಸವ ರಥ ಜಿಲ್ಲೆಯ ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರನ್ನು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿಯಿಂದ ಹಮ್ಮಿಕೊಳ್ಳಲಾದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಆಹ್ವಾನಿಸಲಿದೆ. ಜ.27ಕ್ಕೆ ಸೇಡಂಗೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.ಭಾರತೀಯ ಸಂಸ್ಕೃತಿ ಉತ್ಸವ ಕಲ್ಯಾಣ ಕರ್ನಾಟಕದ ಸ್ವಾಭಿಮಾನದ ಉತ್ಸವವಾಗಿದೆ. ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಉತ್ಸವವಾಗಿದೆ ಎಂದ ಅವರು, 10 ದಿನಗಳ ಈ ಉತ್ಸವದಲ್ಲಿ 30 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ವಿಷಯಗಳ ಕುರಿತು ರಾಷ್ಟ್ರ, ರಾಜ್ಯದ ಸಂತರು, ಚಿಂತಕರು, ಶಿಕ್ಷಣ ತಜ್ಞರು ಉಪನ್ಯಾಸ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಸವ ಸ್ವಾಮಿ ವಿವೇಕಾನಂದರ ಕನಸಿಗೆ ಇಂಬು ಕೊಡಲಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದರು. ತಡೋಳಾದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಶಿಕ್ಷಣ, ಕೃಷಿ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಈ ಭಾಗದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳು ನಡೆದಿವೆ. ಉತ್ಸವ ಇದರ ಭಾಗವೇ ಆಗಿದೆ ಎಂದು ತಿಳಿಸಿದರು.ಆಣದೂರಿನ ಭಂತೆ ಜ್ಞಾನಸಾಗರ್, ವಿಕಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿದರು. ಭಾರತೀಯ ಸಂಸ್ಕೃತಿ ಉತ್ಸವದ ಬೀದರ್ ಜಿಲ್ಲೆಯ ವಿಶೇಷ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್, ಕೆ.ಆರ್.ಇ. ಟ್ರಸ್ಟ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ, ಮುಖಂಡ ಬಿ.ಎಸ್. ಕುದರೆ, ಗುರುದ್ವಾರದ ಜಗಜೀತ್‌ಸಿಂಗ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬಿ.ಜಿ.ಮೂಲಿಮನಿ ಫೌಂಡೇಷನ್ ಅಧ್ಯಕ್ಷ ಶಿವಲಿಂಗಪ್ಪ ಜಲಾದೆ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಪ್ರಮುಖರಾದ ಶಿವಶಂಕರ ಟೋಕರೆ, ಸಂದೀಪ್ ಶೆಟಕಾರ್, ಸಂತೋಷಕುಮಾರ ಮಂಗಳೂರೆ, ಗಣಪತಿ ಸೋಲಪುರೆ, ಆದೀಶ್ ವಾಲಿ ಮತ್ತಿತರರು ಇದ್ದರು.ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರಿ ಸ್ವಾಗತಿಸಿದರು. ಬಸವರಾಜ ಅಷ್ಟಗಿ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ರೇವಣಸಿದ್ದಪ್ಪ ಜಲಾದೆ, ರಾಜೇಂದ್ರ ಮಣಗೀರೆ ಹಾಗೂ ಗುರುನಾಥ ರಾಜಗೀರಾ ಅವರ ನೇತೃತ್ವದ ನೂರಾರು ವಿದ್ಯಾರ್ಥಿಗಳ ತಂಡಗಳು ಶಿವನಗರ, ಜನವಾಡ ರಸ್ತೆ ಹಾಗೂ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತಕ್ಕೆ ಬಂದು ಸೇರಿದವು. ಅಲ್ಲಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ರಥದೊಂದಿಗೆ ಗಣೇಶ ಮೈದಾನಕ್ಕೆ ತೆರಳಿದರು.