ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬಸವ ಸೇವಾ ಪ್ರತಿಷ್ಠಾನವನ್ನು ಮಹಿಳೆಯರಿಗಾಗಿ ಕಟ್ಟಿ ಅವರ ಹಿತವನ್ನು ಕಾಪಾಡಿದೆ ಎಂದು ಡಾ. ಗಂಗಾಂಬಿಕಾ ಅಕ್ಕ ನುಡಿದರು.ಅವರು ಬಸವಕೇಂದ್ರ ಸಂಸ್ಥೆಯು ಆಯೋಜಿಸಿದ ಶರಣ ಸಂಗಮ, ಡಾ.ಅನ್ನಪೂರ್ಣತಾಯಿ ನುಡಿ ನಮನ, ಪರಿಸರ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿ, ಹೆಣ್ಣು ಮಕ್ಕಳಿಂದ ಯಾವ ಅತ್ಯದ್ಭುತ ಕಾರ್ಯ ಮಾಡಬಹುದೆಂಬುದಕ್ಕೆ ಅಕ್ಕ ಅನ್ನಪೂರ್ಣ ನಿದರ್ಶನ. ಪ್ರಕೃತಿ ನಮಗೆ ಎಲ್ಲವನ್ನು ನೀಡುತ್ತಿದ್ದು, ಕೆಲವು ಕ್ಷಣ ಆಮ್ಲಜನಕ ನಿಂತು ಹೋದರೆ ಏನಾಗುತ್ತದೆಂಬ ಅರಿವು ನಮಗಿರಬೇಕು. ಹಸಿರು ಇಲ್ಲದ ಜೀವನ ನರಕಯಾತನೆಯಾಗುತ್ತದೆ. ಮರ ಕಡಿಯದಿರಿ, ಕಾಂಕ್ರಿಟ ಜಗತ್ತು ಬೆಳೆಸದಿರಿ ಎಂದು ಪರಿಸರದ ಬಗ್ಗೆ ಅನುಭಾವ ನೀಡಿದರು.
ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಕಾಪಾಡದಿದ್ದರೆ ಮುಂದೊಂದಿನ ನಾವೇ ಪರಿಣಾಮ ಎದುರಿಸಬೇಕಾಗುತ್ತದೆ. ಪರಿಸರದ ಹಿತವೇ ನಮ್ಮ ಹಿತವಾಗಿದೆ ಎಂದರು.ಅಕ್ಕ ಅನ್ನಪೂರ್ಣ ಅವರ ಇಡೀ ಜೀವನ ಬಸವಮಯವಾಗಿತ್ತು. ಇವರು ವ್ಯಕ್ತಿಯಾಗಿರದೆ ಬಸವ ಶಕ್ತಿಯಾಗಿ, ವಿಜಯೋತ್ಸವ ಆಯೋಜಿಸಿ ರಾಜ್ಯದ ಗಮನ ಸೆಳೆದ ಅಪರೂಪದ ಅಕ್ಕ. ಸಾಹಿತ್ಯ, ಸಂಸ್ಕೃತಿ, ಜಾಗೃತಿಯಿಂದ ಸಾವಿರಾರು ಮಹಿಳೆಯರನ್ನು ಬಸವ ಸಂಸ್ಕೃತಿಗೆ ಸೆಳೆದು ತಂದು ಬಸವತತ್ವ ಗಟ್ಟಿಗೊಳಿಸಿದ ಮಾತೆ. ಇನ್ನು ಮುಂದೆ ಡಾ.ಗಂಗಾಂಬಿಕೆ ಅಕ್ಕನವರ ಸಾರಥ್ಯದಲ್ಲಿ ಮುನ್ನಡೆಸಲು ಎಲ್ಲರೂ ಸಹಕರಿಸಿ ಶಿಕ್ಷಕ ಶರಣಯ್ಯ ಸ್ವಾಮಿ ಸಾರಥ್ಯದಲ್ಲಿ ಬಸವ ಮಿಷನ್‌ನಿಂದ ಜಿಲ್ಲೆಯ ಬಸವ ಅನುಯಾಯಿಗಳ ಮನೆ ಮನೆಗೆ ವಿಭೂತಿ, ಲಿಂಗ, ರುದ್ರಾಕ್ಷಿ, ವಚನ ಪುಸ್ತಕ ಉಚಿತವಾಗಿ ಕೊಡಮಾಡುವ ಕಾರ್ಯಕ್ಕೆ ಚನ್ನಬಸವ ಬಿರಾದಾರ ಮತ್ತು ಸಿದ್ರಾಮಪ್ಪ ಕಪಲಾಪೂರೆ ನಿಯುಕ್ತಿಗೊಳಿಸಿರುವ ಕಾರ್ಯ ಸ್ತುತ್ಯಾರ್ಹ ಎಂದರು.
ಶರಣಯ್ಯ ಸ್ವಾಮಿ ತನ್ನ ವೇತನದಿಂದ ಇರ್ವ ಚರ ಜಂಗಮರಿಗೆ ತಿಂಗಳಿಗೆ ವೇತನ ಕೊಟ್ಟು ಬಸವಕಾರ್ಯ ಮಾಡಿಸಲು ಸಂಕಲ್ಪ ತೊಟ್ಟಿರುವುದು ಸ್ಮರಣೀಯ ಎಂದರು.ಬಸವಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಬದುಕು ಸಾರ್ಥಕವಾದರೆ ನೆನಪಾಗುತ್ತಾರೆ. ಅಕ್ಕ ಬಸವತತ್ವ ಪರಿಪಾಲಿಸಿ, ಪರಿಣಾಮಕಾರಿ ಸಂಘಟನೆ ಮಾಡಿದ್ದು ಅಲ್ಲಗಳೆಯಲು ಸಾಧ್ಯವಿಲ್ಲ. ಹುಟ್ಟು ಸಾವು ಸಹಜ, ಇಂದು ಪರಿಸರ ಹಾಳಾಗದಂತೆ ಪ್ರತಿಯೊಬ್ಬರು ಗಿಡ ನೆಡುವುದಕ್ಕಿಂತ ಸಂರಕ್ಷಣೆ ಮಾಡಿ ಬೆಳೆಸಲು ವಿನಂತಿಸಿದರು.
ಜಾಗತಿಕ ಲಿಂಗಾಯತ ಮಹಿಳಾ ಘಟಕದ ಉಷಾ ಮಿರ್ಚೆ, ತರಬೇತಿ ಸಂಸ್ಥೆಯ ಉಪತಹಸೀಲ್ದಾರ್ ರವಿ ರೊಟ್ಟಿ, ವೈಜ್ಞಾನಿಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಾಬು ದಾನಿ ತಮ್ಮ ಅನುಭಾವ ನೀಡಿ, ತಮ್ಮ ಸಂಸ್ಥೆಯಿಂದ ಜೂ.13ರಂದು ಬೀದರ ನಗರದಲ್ಲಿ ಡಾ.ಗಂಗಾಂಬಿಕೆ ಅಕ್ಕನವರ ಕಾಯಕಕ್ಕೆ ಕಾಯಕ ರತ್ನ ರಾಜ್ಯ ಪ್ರಶಸ್ತಿ ಕೊಡಲಾಗುವುದೆಂದು ಪ್ರಕಟಿಸಿದರು. ವಯೋನಿವೃತ್ತರಾದ ಶಶಿಧರ ಪಾಟೀಲ, ಶರಣಯ್ಯ ಸ್ವಾಮಿ, ಇಂದಿರಾಬಾಯಿ ಮಜಗೆ ಸಿಇಟಿ ರ್‍ಯಾಂಕ್ ಪಡೆದ ದರ್ಶನ ಭದ್ರಾಪೂರ ಹಾಗೂ ಭಕ್ತಿ ಸೇವೆ ಮಾಡಿದ ಶಿಲ್ಪಾ ಮಹೇಶ ಮಜಗೆ ಅವರಿಗೆ ಗೌರವಿಸಲಾಯಿತು.ಯುವ ಅಧ್ಯಕ್ಷ ಸುರೇಶ ಚನ್ನಶಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಮಜಗೆ ಸ್ವಾಗತಿಸಿ, ಶಿವಶಂಕರ ಟೋಕರೆ ನಿರೂಪಿಸಿ, ವೀರಶಟ್ಟಿ ಚನ್ನಶಟ್ಟಿ ವಂದಿಸಿದರು. ವೈಜಿನಾಥ ಸಜ್ಜನಶೆಟ್ಟಿ, ವೀರುಪಾಕ್ಷ ದೇವರು ರಾಜಮ್ಮ ಚಿಕ್ಕಪೇಟೆ, ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು.