ಸಾರಾಂಶ
- ಶಿವಯೋಗಿ ಮಂದಿರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಜಾಗೃತಿ ಕಾರ್ಯಕ್ರಮ । ಅಣಬೇರು ರಾಜಣ್ಣ ಚಾಲನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಬಸವ ತತ್ವಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಸೆ. 15 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದೇವೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಜಯದೇವ ವೃತ್ತದ ಶಿವಯೋಗಿ ಮಂದಿರ ಆವರಣದಲ್ಲಿ ಶುಕ್ರವಾರ ಸಂಜೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಬಸವ ತತ್ವವನ್ನು ತಿಳಿಸುವುದು ಅಭಿಯಾನದ ಮುಖ್ಯ ಗುರಿಯಾಗಿದೆ. ಬಸವ ತತ್ವಗಳು ಕೇವಲ ವೀರಶೈವರ, ಲಿಂಗಾಯತರ ಸ್ವತ್ತಲ್ಲ. ಅವು ಇಡೀ ಮಾನವ ಕುಲದ ಆಸ್ತಿಯಾಗಿವೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ....ಸೂತ್ರಗಳು ಇಡೀ ಮನುಕುಲದ ಸತ್ವಗಳು ಬಸವ ತತ್ವದಲ್ಲಿದೆ. ಯಾರು ಬಸವ ತತ್ವಗಳನ್ನು ಆಚರಣೆ ಮಾಡುತ್ತಾರೋ ಅವರು ಜೀವನದಲ್ಲಿ ಸುಖ- ಶಾಂತಿ- ನೆಮ್ಮದಿ- ಸಮೃದ್ಧಿ ನ್ನು ಕಾಣುತ್ತಾರೆ ಎಂದರು.
ಈ ಹಿನ್ನೆಲೆ ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗೌರವ ಘೋಷಿಸಿದೆ. ಶರಣರ ಆಶಯಗಳಂತೆ ಕಾಯಕ ನಿರ್ವಹಿಸುತ್ತಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು ರಚಿಸಿಕೊಂಡು ಇಂದು ಬಸವ ತತ್ವಗಳನ್ನು ಮನೆ ಮನೆಗೆ ಮುಟ್ಟಿಸಲಾಗುತ್ತಿದೆ. ಇದಕ್ಕಾಗಿಯೇ ಬಸವ ಸಂಸ್ಕೃತಿ ಅಭಿಯಾನ ಆರಂಭವಾಗಿದೆ ಎಂದರು.ಸೆ.1ರಿಂದ ವಿಜಯಪುರದ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿ ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಬರುವ ಅಕ್ಟೋಬರ್ 5ರಂದು ಪ್ರತಿಯೊಂದು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2ರಂದು ಕಲ್ಬುರ್ಗಿ, 3ರಂದು ಬೀದರ್, 4ರಂದು ಯಾದಗಿರಿ, 5ರಂದು ರಾಯಚೂರಿನಲ್ಲಿ ನಡೆಯುತ್ತಿದೆ. ಎಲ್ಲ ಕಡೆಗೆ ಭಕ್ತರು ಅಭೂತಪೂರ್ವಕ ಸ್ವಾಗತ ನೀಡುತ್ತಿದ್ದಾರೆ. ಹಾಗಾಗಿ ಇಂತಹ ಕಾರ್ಯಕ್ರಮಗಳು, ಒಳ್ಳೆಯ ವಿಚಾರಗಳು ಜನರಿಗೆ ನೀಡುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.
ಬಸವ ಸಂಸ್ಕೃತಿ ಅಭಿಯಾನ ಅಧ್ಯಕ್ಷ, ಉದ್ಯಮಿ ಅಣಬೇರು ರಾಜಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಸವ ಸಂಸ್ಕತಿ ಅಭಿಯಾನ ಮಾಡಬೇಕು ಅಂತ 400 ರಿಂದ 500 ಮಠಾಧಿಪತಿಗಳ ಸಂಕಲ್ಪದಿಂದ ಆರಂಭ ಮಾಡಲಾಗಿದೆ. ಸೆ.15ರಂದು ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮ ನಡೆಯಲಿದೆ. ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರು ವಚನಗಳನ್ನು ರಚಿಸಿದ್ದಾರೆ. ಬದುಕಿನ ಬದಲಾವಣೆ ಹಾಗೂ ಸಮಾಜದ ಪರಿವರ್ತನೆ ಮಾಡುವಂತ ಶಕ್ತಿ ವಚನ ಸಾಹಿತ್ಯದಲ್ಲಿದೆ. ನಾಳೆಯಿಂದ 4 ವಾಹನಗಳು ಬಸವ ಸಂಸ್ಕೃತಿ ಅಭಿಯಾನ ಜಾಗೃತಿಗಾಗಿ ಜಿಲ್ಲೆಯ ಪ್ರತಿ ಹೋಬಳಿ ತಾಲೂಕುಮಟ್ಟದಲ್ಲಿ ಪ್ರಚಾರ ಮಾಡಲಿವೆ. ಸಮಾಜದ ಎಲ್ಲ ಯುವಕರು, ಭಕ್ತರು ಸೇರಿ ಯಶಸ್ವಿಗೊಳಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಎಂ.ಶಿವಕುಮಾರ, ಅಭಾವೀಮ ಅಧ್ಯಕ್ಷ ಐಗೂರು ಚಂದ್ರಶೇಖರ, ಆವರಗೆರೆ ರುದ್ರಮುನಿ, ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ರುದ್ರಗೌಡ, ವಿಶ್ವೇಶ್ವರಯ್ಯ, ಮೆಳ್ಳೆಕಟ್ಟೆ ನಾಗರಾಜಪ್ಪ, ಹಿರಿಯ ವಕೀಲ ಅನೀಸ್ ಪಾಷ, ಮಂಜುನಾಥ್ ಕರೀಗೌಡ, ಮರುಳ ಸಿದ್ದಯ್ಯ, ಪರಮೇಶ್ವರಪ್ಪ, ಶಶಿಧರ, ಶಿವನಗೌಡ ಪಾಟೀಲ್, ವನಜ ಮಹಾಲಿಂಗಯ್ಯ, ಮಮತಾ ನಾಗರಾಜ್, ಕುಸುಮ ಲೋಕೇಶ, ಪ್ರೇಮಾ ಮಂಜುನಾಥ್, ವೀಣಾ ಮಂಜುನಾಥ್, ಮಧುಮತಿ ಗಿರೀಶ್, ಶೋಭಾ, ಭಕ್ತರು ಭಾಗವಹಿಸಿದ್ದರು.
- - --5ಕೆಡಿವಿಜಿ46:
ದಾವಣಗೆರೆಯಲ್ಲಿ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಜಾಗೃತಿ ಕಾರ್ಯಕ್ರಮ ನಡೆಯಿತು.