೧೨ನೇ ಶತಮಾನದ ಶರಣರು ತಮ್ಮ ವಚನಗಳ ಮೂಲಕ ಸತ್ಯ, ಶಿಸ್ತು, ಕಾಯಕ, ಸಮಾನತೆ ಮತ್ತು ಆತ್ಮವಿಶ್ವಾಸದಂತಹ ಮೌಲ್ಯಗಳನ್ನು ಸಾರಿದ್ದಾರೆ.
ಶಿರಹಟ್ಟಿ: ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದ ಅಭಿವೃದ್ಧಿಗೆ ನೀಡಿದ ಸಂದೇಶಗಳು ವಿಶ್ವಕ್ಕೆ ಮಾದರಿ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ತಿಳಿಸಿದರು.ತಾಲೂಕಿನ ಮಾಗಡಿ ಗ್ರಾಮದ ಎನ್.ವಿ. ಅಂಗಡಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶರಣರ ನಡೆ ವಿದ್ಯಾರ್ಥಿಗಳ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿ ತಮ್ಮ ವಚನಗಳ ಮೂಲಕ ಸಮಾಜವನ್ನು ಪರಿವರ್ತನೆ ಮಾಡಲು ಮುಂದಾದ ಶರಣರ ವಿಚಾರಧಾರೆಗಳು ೨೧ನೇ ಶತಮಾನದಲ್ಲಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಎಂದರು. ಶರಣರ ವಚನಗಳು ೧೨ನೇ ಶತಮಾನದಲ್ಲಿ ರಚಿತವಾಗಿದ್ದರೂ ಅವು ಇಂದಿಗೂ ಪ್ರಸ್ತುತ. ಅದರಲ್ಲಿನ ಪ್ರತಿಯೊಂದು ವಚನವು ಬದುಕಿಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಸದಾಕಾಲ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಭ್ಯಾಸವನ್ನು ಮಾಡುತ್ತಾ ಹೋಗಬೇಕು. ಶರಣರ ತತ್ವದಂತೆ ತಂದೆ- ತಾಯಿಗಳನ್ನು, ಹಿರಿಯರನ್ನು ಪೂಜ್ಯ ಭಾವನೆಯಿಂದ ಗೌರವಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ೧೨ನೇ ಶತಮಾನದ ಶರಣರು ತಮ್ಮ ವಚನಗಳ ಮೂಲಕ ಸತ್ಯ, ಶಿಸ್ತು, ಕಾಯಕ, ಸಮಾನತೆ ಮತ್ತು ಆತ್ಮವಿಶ್ವಾಸದಂತಹ ಮೌಲ್ಯಗಳನ್ನು ಸಾರಿದ್ದಾರೆ. ಅವರ ಕಾಯಕವೇ ಕೈಲಾಸ ಎಂಬ ಸಂದೇಶವು ವಿದ್ಯಾರ್ಥಿಗಳಿಗೆ ಪರಿಶ್ರಮದ ಮಹತ್ವವನ್ನು ತಿಳಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಸೋಮಣ್ಣನವರ್ ಮಾತನಾಡಿ, ೧೨ನೇ ಶತಮಾನದ ಶರಣರು ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇತಿಹಾಸವನ್ನು ಮೇಲುಕು ಹಾಕಿದಾಗ ಶರಣರು ಸಮಾಜಕ್ಕೆ ಕೊಡುಗೆ ನೀಡಿರುವುದು ಗೊತ್ತಾಗುತ್ತದೆ ಎಂದರು.
ಬುದಪ್ಪ ಅಂಗಡಿ, ಬಿ.ಕೆ. ನಿಂಬನಗೌಡ್ರು, ವಾಸುದೇವ್ ಕಲಾಲ್, ಬಿ.ಎಸ್. ಮುಗಳಿ, ಪ್ರಹ್ಲಾದ್ ಮಾಳದಕರ್, ಸುಮಂಗಲಾ ಯಲವಗಿ, ಶಾಂತಕುಮಾರಿ ಪಿ.ಎನ್., ಪಾರ್ವತಿ ಕೆಂಚನಗೌಡ, ಮುತ್ತು ಕುರುಬಗೌಳಿ, ಎಸ್.ಎಸ್. ಪಾಟೀಲ್, ನಿವೇದಿತಾ ಮೇಟಿ, ವಿನೋದ್ ರಣತೂರ್ ಸೇರಿದಂತೆ ಅನೇಕರು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದರು.