ಶುದ್ಧ ಕಾಯಕಕ್ಕೆ ಮಹತ್ವ ನೀಡಿದವರು ಬಸವಾದಿ ಶರಣರು: ಶಿವಕುಮಾರಗೌಡ ಪಾಟೀಲ

| Published : Aug 26 2024, 01:31 AM IST

ಶುದ್ಧ ಕಾಯಕಕ್ಕೆ ಮಹತ್ವ ನೀಡಿದವರು ಬಸವಾದಿ ಶರಣರು: ಶಿವಕುಮಾರಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾನತೆ ಮತ್ತು ಜಾತ್ಯತೀತ ತತ್ವವನ್ನು ಕಾಯಕದಲ್ಲಿ ಕಾಣಬೇಕು. ಅಂತಹ ಕಾಯಕವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ‌ಶಿವಕುಮಾರಗೌಡ ಪಾಟೀಲ ಹೇಳಿದರು.

ಧಾರವಾಡ: ಬಸವಾದಿ ಶರಣರು ಪರಿಶುದ್ಧ ಕಾಯಕಕ್ಕೆ ಮಹತ್ವ ನೀಡಿದರು. ನಾವು ಮಾಡುವ ಕೆಲಸದಲ್ಲಿ ಒಳ್ಳೆಯ ಉದ್ದೇಶ ಇರಬೇಕು ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ‌ಶಿವಕುಮಾರಗೌಡ ಪಾಟೀಲ ಹೇಳಿದರು.

ಇಲ್ಲಿಯ ಕೆಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ‌ ವಾರ್ಷಿಕ ಸರ್ವ ಸದಸ್ಯರ ಸಭೆ, ನಿವೃತ್ತರ‌ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.12ನೇ ಶತಮಾನದ ಶರಣರ ನಿಷ್ಕಲ್ಮಶ ಮತ್ತು ಪರಿಶುದ್ಧ ಕಾಯಕ ತತ್ವವೇ ಸಹಕಾರಿ ತತ್ವಕ್ಕೆ ಪ್ರೇರಣೆ. ನಾವು ಮಾಡುವ ಕೆಲಸದ ಬಗ್ಗೆ ಗೌರವ ಇರಬೇಕು. ಸಮಾನತೆ ಮತ್ತು ಜಾತ್ಯತೀತ ತತ್ವವನ್ನು ಕಾಯಕದಲ್ಲಿ ಕಾಣಬೇಕು. ಅಂತಹ ಕಾಯಕವನ್ನು ಪ್ರತಿಯೊಬ್ಬರೂ ಮಾಡಬೇಕು. ಇದೇ ತತ್ವ ಸಹಕಾರ ವಲಯದಲ್ಲಿದೆ. ಆದ್ದರಿಂದ ವೃತ್ತಿ ಮೇಲಿನ ಗೌರವ ಉಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

ಕೆಸಿಸಿ ಬ್ಯಾಂಕ್ ಇದೀಗ ಆರ್ಥಿಕವಾಗಿ ಸದೃಢವಾಗಿದ್ದು, ಲಾಭದತ್ತ ಮುನ್ನಡೆಯುತ್ತಿದೆ. ಈ ವರ್ಷ ₹25 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಿದ್ದು, ಈ ಗುರಿ ತಲುಪಲು ನೌಕರರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಪಾಟೀಲ ಮನವಿ ಮಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಶಾಂತವೀರಪ್ಪ‌ ಮೆಣಸಿನಕಾಯಿ, ಅರಟಾಳ ರುದ್ರಗೌಡರಂತಹ ಮಹನೀಯರು ಸಮಾಜದ ಒಳಿತಿಗಾಗಿ ಬ್ಯಾಂಕ್ ಸ್ಥಾಪಿಸುವ ಮಹತ್ಕಾರ್ಯ ಮಾಡಿದ್ದಾರೆ. ಈ‌ ಭಾಗದ ಜನರ ಆರ್ಥಿಕ ಬದುಕು ಸುಧಾರಣೆಗೆ ಕೊಡುಗೆ ನೀಡಿರುವ ಅವರು ಸದಾ ಪ್ರಾತಃಸ್ಮರಣೀಯರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ, ನಿರ್ದೇಶಕ ಸಿದ್ದಪ್ಪ‌ ಸಪ್ಪೂರಿ, ಸಿಇಒ ಡಾ. ಸುನೀತಾ ಸಿದ್ರಾಮ, ಸಂಘದ ಉಪಾಧ್ಯಕ್ಷ ಶಿವಾನಂದ ಆಲದಕಟ್ಟಿ, ಆಡಳಿತ ಮಂಡಳಿ ಸದಸ್ಯರು ಇದ್ದರು. ಸಂಘದ ಅಧ್ಯಕ್ಷ ಎಸ್.ವಿ. ಹೂಗಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸದಸ್ಯರಿಗೆ ಬೀಳ್ಕೊಡುಗೆ ಮತ್ತು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಸಿ.ಡಿ. ಮಲ್ಲಾಪೂರ ಸ್ವಾಗತಿಸಿದರು. ಮಹಾರಾಜ ಪಾಟೀಲ ನಿರೂಪಿಸಿ, ವಂದಿಸಿದರು.