ನಮ್ಮ ಜೀವನದ ನಿಜವಾದ ಶಿಲ್ಪಿಗಳು ನಾವೇ

| Published : Apr 21 2025, 12:49 AM IST

ಸಾರಾಂಶ

ಜೀವನದಲ್ಲಿ ಸಣ್ಣ ಪುಟ್ಟ ಗುರಿಗಳ ಬದಲು ದೊಡ್ಡ ದೊಡ್ಡ ಗುರಿ, ಉದ್ದೇಶ ಇಟ್ಟುಕೊಳ್ಳುವುದೇ ನಿಜವಾದ ಪರೋಪಕಾರ

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಜೀವನದ ನಿಜವಾದ ಶಿಲ್ಪಿಗಳು ನಾವೇ ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಎ.ಆರ್. ಚೇತನ್ ರಾಮ್ ತಿಳಿಸಿದರು.

ನಗರದ ಬಸವಮಾರ್ಗ ಸಂಸ್ಥೆಯಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡಿದ ಅವರು, ಜೀವನದಲ್ಲಿ ಸಣ್ಣ ಪುಟ್ಟ ಗುರಿಗಳನ್ನು ಇಟ್ಟುಕೊಳ್ಳುವುದು ದೊಡ್ಡ ಅಪರಾಧ. ದೊಡ್ಡ ದೊಡ್ಡ ಗುರಿ, ಉದ್ದೇಶಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಪರೋಪಕಾರ. ಈ ನಿಟ್ಟಿನಲ್ಲೇ ಸಮಾಜಮುಖಿ ಕೆಲಸ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಬೇಕು. ದೊಡ್ಡ ಕನಸು, ದೊಡ್ಡ ಗುರಿಯಿಂದ, ದೊಡ್ಡ ಯಶಸ್ಸು, ಶ್ರೇಯಸ್ಸು ‌ಸಿಗುತ್ತದೆ ಎಂದರು.

ಮನುಷ್ಯನಿಗೆ ಏನು ಮಾಡಬೇಕು ಎಂದು ತಿಳಿದಿರುವ ಜೊತೆಗೆ, ಏನು ಮಾಡಬಾರದು ಎನ್ನುವುದು ಕೂಡ ತಿಳಿದಿರಬೇಕು. ಮನುಷ್ಯ ಸದಾ ಪ್ರಜ್ಞೆಯಲ್ಲಿ ಇರಬೇಕು. ಪ್ರಜ್ಞೆ ಕಳೆದುಕೊಂಡರೆ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಯೋಚನೆ ಮಾಡಲೂ ನಮ್ಮಿಂದ ಸಾಧ್ಯವಾಗುವುದಿಲ್ಲ. ಕುಡಿತ ಮನುಷ್ಯನ‌ ಪ್ರಜ್ಞೆ ಕಸಿಯುತ್ತದೆ. ಆ ಕಾರಣದಿಂದ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ಈ ಹುಟ್ಟಿಗೆ ಯಾವುದೋ ಒಂದು ಬಲವಾದ ಕಾರಣ ಇದೆ. ದೇವರು ಕೊಟ್ಟ ದೇಹ ಮತ್ತು ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು. ಎಲ್ಲಾ ಅಂಗವನ್ನು ಸುಸ್ಥಿತಿಯಲ್ಲಿ ಇಟ್ಟು ಪರಮಾತ್ಮ ನಮಗೆ ಜೀವ, ಜೀವನ ನೀಡುತ್ತಾನೆ. ಆದರೆ ನಾವೇನು ಮಾಡುತ್ತಿದ್ದೇವೆ? ಬೇಡದ ಚಟಗಳಿಗೆ ದಾಸರಾಗಿ ದೇಹದ ಅಂಗಾಂಗಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದು ದೇವರಿಗೆ ನಾವು ಮಾಡುವ ದೊಡ್ಡ ದ್ರೋಹ. ಈ ಬಗ್ಗೆ ಆತ್ಮ ವಿಮರ್ಶೆ ತುರ್ತಾಗಿ ನಡೆಯಬೇಕಾಗಿದೆ ಎಂದರು.

ಬಸವಮಾರ್ಗ ‌ಸಂಸ್ಥೆಯ ಸಂಸ್ಥಾಪಕ ಎಸ್. ಬಸವಣ್ಣ ಮಾತನಾಡಿ, ವ್ಯಸನಿಗಳ ಸೇವೆಯಲ್ಲಿ ಬಸವಮಾರ್ಗ ಸಂಸ್ಥೆಯು ತನ್ನನ್ನು ತಾನು ಅರ್ಪಿಸಿಕೊಂಡಿದೆ. ಪೌಷ್ಠಿಕ ಆಹಾರ, ವಿಹಾರ, ತರಗತಿ, ಯೋಗ, ಕ್ರೀಡೆ, ಪಾಠ, ಸ್ವಚ್ಛತೆ, ಚಿಕಿತ್ಸೆಯಲ್ಲಿ ಯಾವುದೇ ರಾಜಿ ನಮ್ಮಲ್ಲಿ ಇಲ್ಲ. ವ್ಯಸನಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವರ್ಷವಿಡೀ ಬಸವಮಾರ್ಗದಲ್ಲಿ ವಿನೂತನ, ವಿಭಿನ್ನ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಆ ಮೂಲಕ ವ್ಯಸನಿಗಳ ಸೇವೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರು ಇದೆ. ಆದರೆ ವ್ಯಸನಕ್ಕೆ‌ದಾಸರಾದವರಿಗೆ ಯಾವ ಸೂರಿದೆ. ಆತನಿಗೆ ಸಮರ್ಪಕವಾದ‌ಸೂರು ಕಲ್ಪಿಸಿ, ಬದಲಾವಣೆಗೆ ಸೂಕ್ತ ಅವಕಾಶ, ವೇದಿಕೆ ಕಲ್ಪಿಸುವುದೇ ನಮ್ಮ‌ ಗುರಿ, ಉದ್ದೇಶವಾಗಿದೆ ಎಂದರು‌.

ಸಂಸ್ಥೆಯ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ, ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್, ಸಿಬ್ಬಂದಿ ಆನಂದ್, ಸಂಜಯ್ ಮೊದಲಾದವರು ಇದ್ದರು.