₹5 ಕೋಟಿ ವಿಶೇಷ ಅನುದಾನದಲ್ಲಿ ಬಸವನಕಟ್ಟೆ ಕೆರೆ ಅಭಿವೃದ್ಧಿ: ಶಾಸಕ ಬಸವರಾಜ ಶಿವಣ್ಣನವರ

| Published : Mar 26 2025, 01:38 AM IST

₹5 ಕೋಟಿ ವಿಶೇಷ ಅನುದಾನದಲ್ಲಿ ಬಸವನಕಟ್ಟೆ ಕೆರೆ ಅಭಿವೃದ್ಧಿ: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕೆರೆಗೆ ಮೊದಲು ಮಳೆ ನೀರು ಸಂಗ್ರವಾಗುತ್ತಿತ್ತು. ಆದರೆ ಕಳೆದ ಆರೇಳು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪಕ್ಕದಲ್ಲಿರುವ ಕುಡಿಯುವ ನೀರಿನ ಹೊಂಡದ ಮಾದರಿಯಲ್ಲಿ ಬಸವನಕಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು.

ಬ್ಯಾಡಗಿ: ಸಾರ್ವಜನಿಕರ ಅನುಕೂಲಕ್ಕಾಗಿ ₹5 ಕೋಟಿ ವಿಶೇಷ ಅನುದಾನದಲ್ಲಿ ಪಟ್ಟಣದ ಬಸವನಕಟ್ಟೆ ಕೆರೆ ಅಭಿವೃದ್ಧಿಪಡಿಸುವುದಾಗಿ ಮಂಗಳವಾರ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಈ ಕೆರೆಗೆ ಮೊದಲು ಮಳೆ ನೀರು ಸಂಗ್ರವಾಗುತ್ತಿತ್ತು. ಆದರೆ ಕಳೆದ ಆರೇಳು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪಕ್ಕದಲ್ಲಿರುವ ಕುಡಿಯುವ ನೀರಿನ ಹೊಂಡದ ಮಾದರಿಯಲ್ಲಿ ಬಸವನಕಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.ಕದರಮಂಡಲಗಿ ಕೇವಲ 6 ಲಕ್ಷ ಲೀ. ನೀರು: ಪಟ್ಟಣದಲ್ಲಿ ಈಗಾಗಲೇ 4 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ತುಂಗಭದ್ರಾ ನದಿಯಿಂದ ಬ್ಯಾಡಗಿ ಪಟ್ಟಣಕ್ಕೆ ಬರಬೇಕಾಗಿರುವ ನೀರನ್ನು ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ದ ಕದರಮಂಡಲಗಿ ಗ್ರಾಮ ಪಂಚಾಯಿತಿ 6 ಲಕ್ಷ ಲೀ. ನೀರು ಬಳಕೆ ಮಾಡುವಂತೆ ತಾಕೀತು ಮಾಡಿದ್ದು, ಇದಕ್ಕೆ ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಮುಕ್ತಿಧಾಮ ಅಭಿವೃದ್ಧಿ: ₹2 ಕೋಟಿಗೆ ಸೀಮಿತಗೊಳಿಸಿ ಎಸ್ಎಫ್‌ಸಿ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿದ ಅವರು, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಸದಸ್ಯರ ನಡುವೆ ಸಮನ್ವಯತೆ ಸಾಧಿಸಬೇಕಾಗಿದೆ. ಒಟ್ಟು ₹50 ಲಕ್ಷ ವೆಚ್ಚದಲ್ಲಿ ಬೆಟ್ಟದ ಮಲ್ಲೇಶ್ವರ ರಸ್ತೆಯಲ್ಲಿರುವ ಮುಕ್ತಿಧಾಮ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ರಸ್ತೆ, ಚರಂಡಿಗಳ ಮೇಲೆ ಕಟ್ಟಡ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ಪುರಸಭೆ ಚರಂಡಿಯಿಂದ 1 ಮೀಟರ್(3.3 ಅಡಿ ಸೆಟ್ ಬ್ಯಾಕ್) ಬಿಟ್ಟು ಕಟ್ಟಡ ನಿರ್ಮಿಸುವಂತೆ ನಿಯಮವಿದೆ. ಆದರೆ ಪ್ರತಿಯೊಬ್ಬರೂ ಸೆಟ್ ಬ್ಯಾಕ್ ಬಿಡುವುದಿರಲಿ, ಚರಂಡಿಗಳನ್ನೇ ಮುಚ್ಚಿ ಕಟ್ಟಡವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮಾತ್ರ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ ಅವರು, ನೀವು ಮಾಡುವ ತಪ್ಪು ಹಾಗೂ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಹೈರಾಣಾಗಬೇಕಾಗಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.ಮಳೆ ನೀರು ಕೊಯ್ಲು ಕಡ್ಡಾಯ: ಅಧ್ಯಕ್ಷ ಡಾ. ಬಾಲಚಂದ್ರಗೌಡ ಪಾಟೀಲ ಮಾತನಾಡಿ, ನೂತನವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಸಾರ್ವಜನಿಕರು ಕಡ್ಡಾಯವಾಗಿ ಮಳೆ ನೀರು ಸಂಗ್ರಹವನ್ನು ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅಂತಹ ಮನೆಗಳ ಮನೆ ಪೂರ್ಣಗೊಂಡ ಬಗ್ಗೆ ಪ್ರಮಾಣಪತ್ರವನ್ನು ನೀಡದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ₹5 ಸಾವಿರ ದಂಡವನ್ನು ವಿಧಿಸುವಂತೆ ಸಭೆಯು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿತು.ಸ್ವಚ್ಛ ಭಾರತ ಮಿಷನ್‌: ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ವಾರ್ಡ್‌ಗಳಲ್ಲಿಯೂ ಸ್ವಚ್ಛತೆ ಮಾಡುವ ಕುರಿತು ಅಭಿಯಾನ ನಡೆಸಲಾಗುವುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್ಲೋಗಳನ್ನು ಅಳವಡಿಸಬೇಕಾಗಿದೆ ಎಂದರು.

ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಚೇರ್‌ಮನ್ ಚಂದ್ರಣ್ಣ ಶೆಟ್ಟರ, ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.