ಸಾರಾಂಶ
ಹೊಸಪೇಟೆ: ನಗರದಲ್ಲಿ ಸಂತೋಷ್ ಲಾಡ್ ಫೌಂಡೇಶನ್‌ನಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಗಾಯನ ಕುರಿತ ಧ್ವನಿಸುರುಳಿ ಲೋಕಾರ್ಪಣೆ ಕಾರ್ಯಕ್ರಮ ನಗರದ ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಣದಲ್ಲಿ ಫೆ. 27ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಭಾನುವಾರ ಕಾರ್ಯಕ್ರಮದ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಸವಣ್ಣ, ಅಂಬೇಡ್ಕರ್ ಅವರ ಕುರಿತು ಧ್ವನಿಸುರುಳಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಾಯಕ ನಾಗೇಂದ್ರ ಪ್ರಸಾದ್ ಅವರು ಧ್ವನಿ ಸುರುಳಿ ತಯಾರಿಸಿದ್ದಾರೆ ಎಂದರು.ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಎರಡು ವರ್ಷಗಳ ಹಿಂದೆ ಈ ಕಾರ್ಯಕ್ರಮ ನಡೆಯಬೇಕಿತ್ತು. ಈಗ ಆಯೋಜನೆ ಮಾಡುತ್ತಿದ್ದೇವೆ. ಅಂಬೇಡ್ಕರ್, ಬಸವಣ್ಣನವರ ಇತಿಹಾಸ ಯುವಜನತೆಗೆ ಹೇಳಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವುದೇ ನಿಜ ಇತಿಹಾಸ ಅಂತ ಅಂದುಕೊಂಡಿದ್ದಾರೆ. ಆದರೆ, ನಿಜವಾಗಲೂ ಈ ಇತಿಹಾಸ ಯುವಜನರು ಅರಿಯಬೇಕಿದೆ. ಹಾಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನರು ಬರುವ ನಿರೀಕ್ಷೆ ಇದೆ. ಬಸ್‌ಗಳು, ಟ್ರ್ಯಾಕ್ಸ್‌ಗಳು, ಇತರೆ ವಾಹನಗಳಲ್ಲಿ ಜನರು ಬರಲಿದ್ದಾರೆ. ಈ ಕಾರ್ಯಕ್ರಮಕ್ಕೂ ರಾಜಕೀಯಕ್ಕೆ ಏನೂ ಸಂಬಂಧವಿಲ್ಲ. ಈ ಕಾರ್ಯಕ್ರಮವನ್ನು ರಾಜಕೀಯಕ್ಕೆ ಹೋಲಿಸಬೇಡಿ ಎಂದು ಸಚಿವರು ಸೂಚ್ಯವಾಗಿ ಹೇಳಿದರು.ಬ್ಯಾಡಗಿ ಮೆಣಸಿನಕಾಯಿ ತಂದಿಯಾ ತಾಯಿ?: ಸಚಿವ ಲಾಡ್!ಈ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಬರೆಯಲು ದೂರ ದೂರುಗಳಿಂದ ಆಗಮಿಸಿದ್ದ ಅಭ್ಯರ್ಥಿಗಳ ಪಾಲಕರು ಕ್ರೀಡಾಂಗಣದ ಮರಗಳ ನೆರಳಿನಲ್ಲಿ ಕುಳಿತಿದ್ದರು. ಈ ವೇಳೆ ಅವರ ಬಳಿ ತೆರಳಿ ನೆಲದಲ್ಲೇ ಕುಳಿತ ಸಚಿವ ಲಾಡ್ ಅವರು, "ಎಲ್ಲಿಂದ ಬಂದಿದ್ದೀರಿ, ಮಗನಾ, ಮಗಳಾ ಪರೀಕ್ಷೆಗೆ ಬಂದಿರೋದು, ಅವರು ಎಲ್ಲಿ ಎಕ್ಸಾಂ ಬರೆಯಲು ಹೋಗಿದ್ದಾರೆ? ನೀವು ಇಲ್ಲಿ ಎಕ್ಸಾಂ ಬರೆದ ಹಾಗಿದೆ " ಎಂದು ನಸುನಕ್ಕರು.
ಈ ವೇಳೆ ಮಹಿಳೆಯೊಬ್ಬರು "ನಾನು ಬ್ಯಾಡಗಿಯಿಂದ ಬಂದಿನಿ " ಎಂದರು. ಆಗ ಸಂತೋಷ್ ಲಾಡ್, "ಮೆಣಸಿನಕಾಯಿ ತಂದಿಯಾ ತಾಯಿ " ಎಂದರು. ಆ ಮಹಿಳೆ ತಂದಿಲ್ಲಾ ಎಂದು ಉತ್ತರಿಸಿದರು. ಆಗ ಅಲ್ಲಿ ನೆರೆದಿದ್ದವರು ಸೇರಿದಂತೆ ಎಲ್ಲರೂ ನಕ್ಕರು.ಬಾಲ ಭಿಕ್ಷುಕಿ: ಆನಂತರ ಫುಟ್‌ಪಾತ್ ಮೇಲೆಯೇ ತಿರುಗಾಡಿ ರಸ್ತೆಯ ಬದಿಯ ಗೂಡಂಗಡಿಯಲ್ಲಿ ಟೀ ಕುಡಿದರು. ಟೀ ಕುಡಿದ ಬಳಿಕ ಗೂಡಂಗಡಿಯ ಮಹಿಳೆಗೆ ವ್ಯಾಪಾರ- ವಹಿವಾಟು ಹೇಗಿದೆ? ಮಕ್ಕಳು ಶಾಲೆಗೆ ಹೋಗುತ್ತಾರೆಯೇ? ಮಕ್ಕಳ ಸ್ಕೂಲ್ ಫೀಸ್, ಪುಸ್ತಕಕ್ಕೆ ಸಮಸ್ಯೆ ಇದ್ದರೆ ಹೇಳಿ, ಸಹಾಯ ಮಾಡೋಣ? ಎನ್ನುತ್ತಿದ್ದಂತೆ ಅವರ ಕಣ್ಣಿಗೆ ಭಿಕ್ಷೆ ಬೇಡುವ ಬಾಲಕಿ ಕಣ್ಣಿಗೆ ಬಿದ್ದಳು. ಆ ಬಾಲಕಿ ಬಳಿ ತೆರಳಿ ಯಾರಮ್ಮ ನೀನು, ಶಾಲೆಗೆ ಹೋಗಲ್ವಾ? ನಮ್ಮ ಇಲಾಖೆ ಅಧಿಕಾರಿಗಳು ಎಲ್ಲಿ ಎಂದು ಹಿಂದಿರುಗಿ ನೋಡುವಷ್ಟರಲ್ಲಿ ಆ ಬಾಲಕಿ ಓಟ ಕಿತ್ತಿದ್ದಳು. ಹೆದರಿ ಓಡಿ ಹೋಗುತ್ತಾರೆ. ಇಂತಹವರಿಗೆ ನಾವು ಶಿಕ್ಷಣ ಕೊಡಿಸಬೇಕು ಎಂದು ಸಚಿವರು ನೆರೆದಿದ್ದ ಜನರಲ್ಲಿ ಹೇಳಿದರು.ಬ್ಯಾಟ್ ಬೀಸಿದ ಸಚಿವ ಲಾಡ್!: ಕ್ರಿಕೆಟ್ ಎಂದರೆ ಸಾಕು ಸಚಿವ ಸಂತೋಷ್ ಲಾಡ್ ಅವರಿಗೆ ಬಲು ಪ್ರೀತಿ. ಟೀ ಕುಡಿದು ಕ್ರೀಡಾಂಗಣದತ್ತ ಕಣ್ಣು ಹಾಯಿಸಿದರೆ ಅಲ್ಲಿ ಯುವಕರ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ನಡಿ ಹೋಗೋಣ ಕ್ರಿಕೆಟ್ ಆಡೋಣ ಎಂದು ಕ್ರಿಕೆಟ್ ಆಡಲು ತೆರಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಇಮಾಮ್ ನಿಯಾಜಿ ಅವರಿಗೆ ಬೌಲಿಂಗ್ ಮಾಡಿದರು. ಏನ್ರೀ ಇಮಾಮ್ ಹೀಗೆ ಬೌಲಿಂಗ್ ಮಾಡೋದಾ? ಎಂದು ಯುವಕರಿಗೆ ಬೌಲಿಂಗ್ ಮಾಡಲು ಕೊಡಿ, ಜೋರಾಗಿ ಬೌಲಿಂಗ್ ಮಾಡಿ ಎಂದು ಯುವಕರಿಗೆ ಹುರಿದುಂಬಿಸಿ ಬ್ಯಾಟ್ ಬೀಸಿದರು. ಲಾಡ್ ಅವರು ಭರ್ಜರಿ ಹೊಡೆತಗಳನ್ನು ಬಾರಿಸುತ್ತಲೇ ನೆರೆದಿದ್ದ ಯುವಕರು ಕೇಕೆ ಹಾಕಿದರು.