ಸೊರಬಬಸವಣ್ಣನವರ ವೈಚಾರಿಕ ಕ್ರಾಂತಿ ಮತ್ತು ಅಂಬೇಡ್ಕರ್ ಅವರ ಕಾನೂನಾತ್ಮಕ ಹೋರಾಟಗಳು ಒಂದೇ ನಾಣ್ಯದ ಎರಡು ಮುಖಗಳು. ಅವರಿಬ್ಬರ ಚಿಂತನೆ ಮತ್ತು ಹೋರಾಟ ಸಮಾಜದಲ್ಲಿ ನೈಜ ಸಮಾನತೆ ಮತ್ತು ಸಹೋದರತೆಯನ್ನು ಬಿಂಬಿಸುವುದಾಗಿದೆ. ಅವರ ಹೋರಾಟ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ನುಡಿದರು.
ಕನ್ನಡಪ್ರಭ ವಾರ್ತೆ ಸೊರಬ
ಬಸವಣ್ಣನವರ ವೈಚಾರಿಕ ಕ್ರಾಂತಿ ಮತ್ತು ಅಂಬೇಡ್ಕರ್ ಅವರ ಕಾನೂನಾತ್ಮಕ ಹೋರಾಟಗಳು ಒಂದೇ ನಾಣ್ಯದ ಎರಡು ಮುಖಗಳು. ಅವರಿಬ್ಬರ ಚಿಂತನೆ ಮತ್ತು ಹೋರಾಟ ಸಮಾಜದಲ್ಲಿ ನೈಜ ಸಮಾನತೆ ಮತ್ತು ಸಹೋದರತೆಯನ್ನು ಬಿಂಬಿಸುವುದಾಗಿದೆ. ಅವರ ಹೋರಾಟ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ನುಡಿದರು.ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೊರಬ ಶಾಖೆ ವತಿಯಿಂದ ಹಮ್ಮಿ ಕೊಂಡಿದ್ದ ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ ೮೯ನೇ ಜನ್ಮದಿನ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಮಾಜದ ಇತಿಹಾಸವನ್ನು ಗಮನಿಸಿದಾಗ ಕಾಯಕ ಮತ್ತು ಹುಟ್ಟಿನ ಆಧಾರದ ಮೇಲೆ ಸಮಾಜವನ್ನು ಶ್ರೇಣೀಕೃತವಾಗಿ ಮೇಲು-ಕೀಳು ಎಂದು ವಿಂಗಡಿಸಿದ ಜಾತಿ ವ್ಯವಸ್ಥೆಯು ದೊಡ್ಡ ಶಾಪವಾಗಿ ಪರಿಣಮಿಸಿತ್ತು. ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಕಾಯಕದಿಂದ ಜಾತಿ ಗುರುತಿಸಿಕೊಂಡಿರುವ ಶ್ರೇಣೀಕೃತ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಬಸವಣ್ಣ ಸೇರಿದಂತೆ ವಚನಕಾರರು ಶ್ರೇಷ್ಠ ಕಾಯಕದಿಂದ ಉತ್ತಮ ಬದುಕು ರೂಪಿಸಿಕೊಂಡರೆ ಮಾತ್ರ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯ ಎನ್ನುವುದನ್ನು ಬಿಂಬಿಸಿದ್ದಾರೆ ಎಂದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಿತರಾಗಿ, ಸಂಘಟಿತರಾಗಿ, ಎಂಬ ವಿಚಾರಧಾರೆಗಳನ್ನು ರಾಜ್ಯಾದ್ಯಂತ ಜನರಲ್ಲಿ ಬಿತ್ತಿದ ನಾಯಕ ಪ್ರೊ. ಬಿ. ಕೃಷ್ಣಪ್ಪ. ಶೋಷಣೆ, ಅಸ್ಪöÈಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಅವರು ಕಟ್ಟಿದ ದಲಿತ ಸಂಘರ್ಷ ಸಮಿತಿ ಲಕ್ಷಾಂತರ ಶೋಷಿತರಿಗೆ ಆತ್ಮಗೌರವದ ವೇದಿಕೆಯಾಯಿತು ಎಂದು ಹೇಳಿದರು.
ಪ್ರಾಧ್ಯಾಪಕರಾಗಿದ್ದರೂ ತರಗತಿ ಕೊಠಡಿಗೆ ಸೀಮಿತವಾಗದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಹಕ್ಕು ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಜನರನ್ನು ಸಂಘಟಿಸಿದರು. ಸಾಹಿತ್ಯ, ಬೀದಿ ನಾಟಕ ಹಾಗೂ ಕ್ರಾಂತಿಗೀತೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ, ಸ್ವಾಭಿಮಾನ ಮತ್ತು ಸಮಾನತೆಯ ಹೋರಾಟಕ್ಕೆ ಹೊಸ ದಿಕ್ಕು ತೋರಿದರು ಎಂದು ಸ್ಮರಿಸಿದ ಅವರು, ಪ್ರೊ. ಬಿ. ಕೃಷ್ಣಪ್ಪ ಅವರ ಕನಸುಗಳು ಇನ್ನೂ ಸಂಪೂರ್ಣ ಸಾಕಾರವಾಗಿಲ್ಲ. ಸಮಾಜದಲ್ಲಿ ಅಸಮಾನತೆ ವಿವಿಧ ರೂಪಗಳಲ್ಲಿ ಮುಂದುವರಿ ದಿರುವುದರಿಂದ ಅವರ ಜನ್ಮದಿನವನ್ನು ಕೇವಲ ಆಚರಣೆಯಾಗಿ ನೋಡದೆ ಅವರು ತೋರಿದ ಹಾದಿಯಲ್ಲಿ ಸಾಗುವ ಸಂಕಲ್ಪದ ದಿನವನ್ನಾಗಿ ಆಚರಿಸಬೇಕು ಎಂದರು.ರಾಜ್ಯ ಸಮಿತಿಯ ಪ್ರೊ. ಶಿವಬಸಪ್ಪ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಚಿಂತಕರಾಗಿದ್ದರು. ಅವರ ಚಿಂತನೆಗೆ ವಿಶ್ವ ಮಟ್ಟದಲ್ಲಿ ಗೌರವ ದೊರೆತಿದ್ದು, ಅವರ ಕೃತಿಗಳು ಮತ್ತು ವಿಚಾರಧಾರೆಗಳಿಂದ ಸಂವಿಧಾನದ ಆಶಯಗಳು ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಕೆಯಾಗಬೇಕು. ಶಿಕ್ಷಣ, ಸಂಸ್ಕಾರ ಮತ್ತು ಆರ್ಥಿಕ ಸ್ವಾವಲಂಬನೆಯ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಹೆಚ್. ಬಸವರಾಜ ಹಸ್ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮಹಾಂತೇಶ ಲಂಬಿ, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಕುಮಾರ, ಜಿಲ್ಲಾ ಮಹಿಳಾ ಸಂಚಾಲಕಿ ಗಂಗಮಾಳಮ್ಮ, ಮುಖಂಡರಾದ ಹಣಜಿ ದಿನೇಶ್, ಜಿ.ಕೆ. ಮಂಜು, ಪ್ರಭು ಮೇಸ್ತಿ, ಪರಶುರಾಮ, ಆರ್. ಗಣೇಶ್, ನೀಲಪ್ಪ ಭೂತಣ್ಣನವರ, ಅನಿಲ್‌ಕುಮಾರ್, ಪಕ್ಕೀರಪ್ಪ ದ್ವಾರಳ್ಳಿ, ಬಸಪ್ಪ ಆಲೂರು, ಲಕ್ಷಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.-----
ಫೋಟೊ:೨೨ಕೆಪಿಸೊರಬ-೦೧ : ಸೊರಬ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೊರಬ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ ೮೯ನೇ ಜನ್ಮದಿನ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಡಾ. ಮಹಾಂತ ಸ್ವಾಮಿಗಳು ಉದ್ಘಾಟಿಸಿದರು.