ಸಾರಾಂಶ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸಾಂಸ್ಕೃತಿಕ ನಾಯಕ ತೀರ್ಮಾನ ಕೈಗೊಂಡಿರುವುದು ನಾಡಿನ ಜನತೆಯಲ್ಲಿ ತೀವ್ರ ಸಂತಸ ಉಂಟು ಮಾಡಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿ: ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ "ಅನುಭವ ಮಂಟಪ " ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿ ಹಾಡಿ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕನ್ನು ತೋರಿಸಿದ ವಚನ ಚಳವಳಿ ಹರಿಕಾರ ವಿಶ್ವಗುರು ಬಸವಣ್ಣ ಅವರನ್ನು “ರಾಜ್ಯದ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡುವ ನಿರ್ಣಯ ಐತಿಹಾಸಿಕ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಈ ನಿರ್ಣಯ ಕೈಗೊಂಡಿದ್ದಕ್ಕೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಎಲ್ಲ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದು ನಾಡಿನ ಜನತೆಯಲ್ಲಿ ತೀವ್ರ ಸಂತಸ ಉಂಟು ಮಾಡಿದೆ. 12ನೇ ಶತಮಾನದಲ್ಲಿ ಅಲ್ಲಮಪ್ರಭು ಮತ್ತು ಬಸವಾದಿ ಶರಣರು ನಿರ್ಮಿಸಿದ “ಅನುಭವ ಮಂಟಪ” ಇಡೀ “ವಿಶ್ವದ ಪ್ರಪ್ರಥಮ ಶಾಸನ ಸಭೆ” ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಮೂಲ ಅಡಿಪಾಯವಾಗಿದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರುವ ಸಾರ್ವಕಾಲಿಕ ವಿಚಾರಧಾರೆಯಡಿ ನಿರ್ಮಾಣಗೊಂಡಿದ್ದ, ಅನುಭವ ಮಂಟಪ ಪ್ರಜಾಸತ್ತಾತ್ಮಕ ಮೌಲ್ಯಗಳ ವರ್ಧನೆಗೆ ಬೀಜಾಂಕುರ ಮಾಡಿದಂತಾಗಿದೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳುವಲ್ಲಿ ಪ್ರೇರಣಾ ಶಕ್ತಿಯಾಗಿದೆ. ಬಸವಾದಿ ಶರಣರಿಂದ ರಚಿತಗೊಂಡ ಅಸಂಖ್ಯಾತ ವಚನಗಳೇ ಭಾರತ ಸಂವಿಧಾನದ ಅನುಚ್ಛೇದಗಳಾಗಿ ರೂಪುಗೊಂಡಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ್ದಾರೆ.