ನಾನು ಲಿಂಗಾಯಿತ ಎಂದು ಹೇಳಲು ಇಷ್ಟಲಿಂಗ ಧರಿಸಿ ಬಸವ ತತ್ವಗಳನ್ನು ಅನುಸರಿಸಿಕೊಂಡು ಮುನ್ನಡೆದಾಗ ಉತ್ತಮ ಗೌರವಗಳು ದೊರೆಯುತ್ತವೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ಹೇಳಿದ್ದಾರೆ.

- ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದಲ್ಲಿ ಶ್ರೀಗಳು

- - -

ಚನ್ನಗಿರಿ: ನಾನು ಲಿಂಗಾಯಿತ ಎಂದು ಹೇಳಲು ಇಷ್ಟಲಿಂಗ ಧರಿಸಿ ಬಸವ ತತ್ವಗಳನ್ನು ಅನುಸರಿಸಿಕೊಂಡು ಮುನ್ನಡೆದಾಗ ಉತ್ತಮ ಗೌರವಗಳು ದೊರೆಯುತ್ತವೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ಬಡಾವಣೆಯಲ್ಲಿರುವ ಪ್ರಭು ಎಂಬುವರ ಮನೆ ಅಂಗಳದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ 4ನೇ ವರ್ಷದ ಶ್ರಾವಣ ಬಂತು ಅನುಭಾವ ತಂತು ಎಂಬ ಕಾರ್ಯಕ್ರಮದ ಸಮಾರೋಪದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿದ್ದ ಬಸವಣ್ಣನವರು ಆಗಿನ ಮೌಢ್ಯತೆ ತುಂಬಿದ ಕಾಲದಲ್ಲಿಯೇ ಅಂತರ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದಂತಹ ಮಹಾನ್ ಶರಣರಾಗಿದ್ದಾರೆ. ಸಮಾಜದಲ್ಲಿ ಸಮಾನತೆಯ ತತ್ವವನ್ನು ಸಾರಿದ್ದಾರೆ. ಅಂದಿನ ಅನುಭವ ಮಂಟಪದಲ್ಲಿ ತಾವು ಅನುಭವಿಸಿದ, ಕಣ್ಣಲ್ಲಿ ಕಂಡ ಅನುಭವಗಳನ್ನೇ ವಚನ ಸಾಹಿತ್ಯವಾಗಿ ಬರೆಯುತ್ತಿದ್ದರು ಶರಣರು. ಇಂತಹ ವಚನ ಸಾಹಿತ್ಯವು ಸದಾ ಕಾಲ ಹಸಿರಾಗಿರುತ್ತದೆ ಎಂದರು.

ಮುಂದಿನ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮ ಸರಳ, ಅರ್ಥಪೂರ್ಣವಾಗಿ ಹೆಚ್ಚಿನ ಖರ್ಚು-ವೆಚ್ಚಗಳು ಇಲ್ಲದೇ ಆಯೋಜನೆ ಮಾಡಿ ಕಟ್ಟಕಡೆಯ ವ್ಯಕ್ತಿಗೂ ಬಸವಣ್ಣನವರ ತತ್ವಗಳನ್ನು ತಲುಪಿಸುವ ಚಿಂತನೆ ಮಾಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ.ನಾಗರಾಜ್ ಮಾತನಾಡಿ, ಬಸವಣ್ಣನವರು ತಾನು ಹುಟ್ಟಿದ ಜಾತಿ ಹಾಗೂ ಧರ್ಮದ ಕಟ್ಟೆಯನ್ನು ಹೊಡೆದು ಬಿದ್ದ ಜನರನ್ನು ಅಪ್ಪಿಕೊಂಡು ಒಪ್ಪಿಕೊಂಡು ನೊಂದವರ ಧ್ವನಿಯಾಗಿ ಸರ್ವರಲ್ಲಿಯೋ ಲೇಸನ್ನು ಬಯಸಿದ್ದಕ್ಕೆ ಇಂದು ಅವರನ್ನು ವಿಶ್ವ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಾರೆ ಎಂದರು.

ಸಮಾರಂಭದಲ್ಲಿ ಜನಪದ ಕಲಾವಿದ ಗಂಜಿಕಟ್ಟೆ ಕೃಷ್ಣಮೂರ್ತಿ, ಹಾಸ್ಯ ಕಲಾವಿದ ಜಗನಾಥ್, ಜಾಗತಿಕ ಲಿಂಗಾಯಿತ ತಾಲೂಕು ಘಟಕದ ಅಧ್ಯಕ್ಷ ವಕೀಲ ರಾಜಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಕದಳಿ ವೇದಿಕೆ ಅಧ್ಯಕ್ಷೆ ಪ್ರೇಮಾ, ಕುಬೇಂದ್ರಪ್ಪ, ಕುಮಾರಪ್ಪ, ಚನ್ನಬಸಪ್ಪ, ಶಿವಮೂರ್ತಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು.

- - -

-6ಕೆಸಿಎನ್‌ಜಿ1:

ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮವನ್ನು ಪಾಂಡೋಮಟ್ಟಿ ಶ್ರೀ ಉದ್ಘಾಟಿಸಿದರು.