ಬಹುಮುಖ ವ್ಯಕ್ತಿತ್ವ ಹೊಂದಿದ್ದ ಬಸವಣ್ಣನವರು

| Published : May 14 2024, 01:03 AM IST / Updated: May 14 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಬೇಕಾದರೆ ತನು, ಮನ, ಭಾವ, ಆಚಾರ, ವಿಚಾರಗಳು ಪರಿಪಕ್ವಗೊಂಡು ಆಂತರ್ಯದಲ್ಲಿ ಸಂಸ್ಕರಣಗೊಂಡಾಗ ಮಾತ್ರ ಸಾಧ್ಯ. ಜತೆಗೆ ಬಾಹ್ಯದಲ್ಲಿ ಇವುಗಳನ್ನು ಕಾರ್ಯರೂಪದಲ್ಲಿ ತಂದು ಸಾಂಸ್ಕೃತಿಕ ನಾಯಕನಾಗಿ ಸಮಾಜದಲ್ಲಿ ಎತ್ತರಕ್ಕೆ ಏರಲು ಬಸವಣ್ಣನವರಿಗೆ ಸಾಧ್ಯವಾಯಿತು ಎಂದು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಬೇಕಾದರೆ ತನು, ಮನ, ಭಾವ, ಆಚಾರ, ವಿಚಾರಗಳು ಪರಿಪಕ್ವಗೊಂಡು ಆಂತರ್ಯದಲ್ಲಿ ಸಂಸ್ಕರಣಗೊಂಡಾಗ ಮಾತ್ರ ಸಾಧ್ಯ. ಜತೆಗೆ ಬಾಹ್ಯದಲ್ಲಿ ಇವುಗಳನ್ನು ಕಾರ್ಯರೂಪದಲ್ಲಿ ತಂದು ಸಾಂಸ್ಕೃತಿಕ ನಾಯಕನಾಗಿ ಸಮಾಜದಲ್ಲಿ ಎತ್ತರಕ್ಕೆ ಏರಲು ಬಸವಣ್ಣನವರಿಗೆ ಸಾಧ್ಯವಾಯಿತು ಎಂದು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಚಿಂತನ ಸಾಂಸ್ಕೃತಿಕ ಬಳಗ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಬಹುಮುಖ ವ್ಯಕ್ತಿತ್ವ ಹೊಂದಿದ ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಮತ್ತು ಕಾಯಕ-ದಾಸೋಹ ಈ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ನಡೆ ನುಡಿಯಲ್ಲಿ ಒಂದಾಗಿ ಜಗತ್ತಿಗೆ ಬದುಕನ್ನು ಕಟ್ಟಿಕೊಟ್ಟಿದ್ದರಿಂದ ಅವರು ವಿಶ್ವವಂದ್ಯರು. ಅಂತೆಯೇ ಅವರಿಗೆ ಕರ್ನಾಟಕ ಸರ್ಕಾರ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದ್ದು ಸ್ತುತ್ಯಾರ್ಹ ಕಾರ್ಯ ಎಂದರು.

ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಳಕಟ್ಟಿಯವರು ಬಸವಣ್ಣನವರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರಿಂದಲೇ ವಚನ ಪಿತಾಮಹ ಎನಿಸಿಕೊಂಡರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಬನಸೋಡೆ ವಚನಗಾಯನ, ಡಾ.ವಿ.ಡಿ.ಐಹೊಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಎಸ್.ಪಿ.ಶೇಗುಣಸಿ ನಿರೂಪಿಸಿದರು. ಪ್ರೊ.ಸುಭಾಸ ಕನ್ನೂರ ವಂದಿಸಿದರು. ಡಾ.ಎಂ.ಎಸ್.ಮದಭಾವಿ, ಬಿ.ಎಂ.ಪಾಟೀಲ, ಡಾ.ಎಂ.ಎಸ್.ಚಾಂದಕವಟೆ, ವಿಠಲ ತೇಲಿ, ಜಂಬುನಾಥ ಕಂಚ್ಯಾಣಿ, ಎಸ್.ಜಿ.ನಾಡಗೌಡ, ದೊಡ್ಡಣ್ಣ ಭಜಂತ್ರಿ, ಎ.ಬಿ.ಬೂದಿಹಾಳ, ಬಿ.ಎಚ್.ಹಿರೇಮಠ, ಡಾ.ಸೋಮಶೇಖರ ವಾಲಿ, ಮ.ಗು.ಯಾದವಾಡ, ಡಾ. ಮಲ್ಲಿಕಾರ್ಜುನ ಮೇತ್ರಿ, ಡಾ.ರಮೇಶ ತೇಲಿ, ಮಾದೇವ ಹಾಲಳ್ಳಿ, ಮೋಟಗಿ, ಜಿ.ಬಿ.ಸಾಲಕ್ಕಿ, ಎಂ.ಐ.ಕುಮಟಗಿ, ಪರಶುರಾಮ ಪೋಳ, ಶಶಿ ಸಾತಿಹಾಳ, ಬಿ.ಸಿ.ಹತ್ತಿ, ಎಸ್.ಜಿ.ಕೊಪ್ಪ, ಸವಿತಾ ಝಳಕಿ, ಆರ್.ಎಸ್.ಪಾಟೀಲ, ಡಾ.ಉಷಾದೇವಿ ಹಿರೇಮಠ, ಮಾದವ ಗುಡಿ, ಜಿ.ಆರ್.ಕುಲಕರ್ಣಿ, ಬಗಲಿ, ಶರಣಗೌಡ ಪಾಟೀಲ, ಈಶ್ವರಗೊಂಡ, ಸಂಗಪ್ಪ ಶಿವಣಗಿ, ಬಿ.ಕೆ.ಗೋಟ್ಯಾಳ, ಪ್ರೊ. ಬಿ.ಎಸ್.ದೊಡಮನಿ, ಎಂ.ಎಲ್.ಮದಭಾವಿ, ಜಗದೀಶ ಗಲಗಲಿ ಉಪಸ್ಥಿತರಿದ್ದರು.