ಬಸವಣ್ಣ ಸಮಗ್ರ ಕ್ರಾಂತಿಕಾರಿ ನಾಯಕ, ವಿಶ್ವಗುರು: ತರಳಬಾಳು ಶ್ರೀ

| Published : May 21 2024, 12:34 AM IST

ಬಸವಣ್ಣ ಸಮಗ್ರ ಕ್ರಾಂತಿಕಾರಿ ನಾಯಕ, ವಿಶ್ವಗುರು: ತರಳಬಾಳು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದುಬೈನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಭಾಗವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಿದರೆ ಬಸವ ಜಯಂತಿ ಆಚರಣೆಗೆ ಸಾರ್ಥಕ ಭಾವ ಬರುತ್ತದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.

ದುಬೈನ ಜೆ.ಎಸ್.ಎಸ್.‌ ಶಾಲೆಯ ಸಭಾಂಗಣದಲ್ಲಿ ಯು.ಎ.ಇ. ಬಸವ ಸಮಿತಿ ಆಯೋಜಿಸಿದ್ದ ೧೭ನೆಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬಸವಣ್ಣನವರ ವಚನಗಳಲ್ಲಿ ಅರ್ಥಶಾಸ್ತ್ರ, ರಾಜಕೀಯ, ಮಾನವೀಯ ಮೌಲ್ಯಗಳಲ್ಲದೆ ಬದುಕಿಗೆ ಮಾರ್ಗದರ್ಶನ ಮಾಡುವಂತಹ ಹಲವು ಸಂಗತಿಗಳು ಇವೆ. ದುಬೈನಲ್ಲಿ ನೆಲೆಸಿರುವ ನೀರು ನಿಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ ಬಸವ ಸಂಸ್ಕೃತಿಯನ್ನು ಬೋಧಿಸಬೇಕು. ನಿಮಗೆ ಲಭ್ಯವಿರುವ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆಯಲ್ಲಿ ಮಕ್ಕಳಿಗೆ ನಿತ್ಯವೂ ಒಂದೊಂದು ವಚನವನ್ನು ಹೇಳಿಕೊಡಬೇಕು ಎಂದರು.ಜಗತ್ತಿನ ವಿಚಾರಗಳು, ಚಿಂತನೆಗಳು ಜಗತ್ತನ್ನು ಆಳುತ್ತವೆ. ಬಸವಣ್ಣನವರ ವೈಚಾರಿಕ ಚಿಂತನೆಗಳಿಂದ ಅವರು ವಿಶ್ವಗುರುವಾದರು. ಅವರದು ಕಾಯಕ ಧರ್ಮ, ಮಾನವ ಧರ್ಮ ಆಯಿತು. ಬಸವ ಸಂಸ್ಕೃತಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಸಮಾಜದ ವ್ಯವಸ್ಥೆಯಲ್ಲಿನ ಜಾತೀಯತೆ, ಮೌಢ್ಯ, ಅಸ್ಪೃಶ್ಯತೆಗಳ ವಿರುದ್ಧ ಮೌನ ಮುರಿದಿದ್ದರು. ಅವರು ಮೌನವಾಗಿರಲಿಲ್ಲ ಎಂದರು.

ಅಲ್ಲದೆ, ತಾವು ರೂಪಿಸಿರುವ ವಚನ ಸಂಪುಟ ಆಪ್‌ನಲ್ಲಿ ಶಿವಶರಣರ ೨೨ ಸಾವಿರಕ್ಕೂ ಹೆಚ್ಚು ವಚನಗಳನ್ನು ಅಳವಡಿಸಿದ್ದೇವೆ. ಕನ್ನಡ ಬಾರದ ಮಕ್ಕಳೂ ಕಲಿಯುವಂತೆ ಅನುವಾಗಲು ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿಯೂ ವಚನಗಳನ್ನು ಅಳವಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಕರ್ನಾಟಕ ಸರ್ಕಾರ ಇತ್ತೀಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರನ್ನು ಸಾಮಾಜಿಕ ನಾಯಕ ಎನ್ನುವುದು ಅವರ ಒಂದು ಭಾಗದ ಚಿತ್ರಣವಾಗುತ್ತದೆ. ಬಸವಣ್ಣನವರು ಸಮಗ್ರ ಕ್ರಾಂತಿಕಾರಿ ನಾಯಕ, ವಿಶ್ವಗುರು ಎಂದು ಶ್ರೀಗಳು ಬಣ್ಣಿಸಿದರು.

ಗುರುಮಠಕಲ್ಲ ಶಾಂತವೀರ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ತಮ್ಮ ವೈಚಾರಿಕ ನಡೆ ನುಡಿಗಳಿಂದ ವಿಶ್ವಗುರುವಾಗಿದ್ದರು. ಅವರದು ಕಾಯಕ ಮತ್ತು ಮಾನವ ಧರ್ಮ ಆಗಿತ್ತು ಎಂದರು.

ಹಿರಿಯ ಅಧಿಕಾರಿ ಸತೀಶ್‌ ಕುಮಾರ್‌ ಶಿವನ್‌, ಐಎಎಸ್‌ ಅಧಿಕಾರಿ ಸಿ. ಸೋಮಶೇಖರ್‌, ಚಲನಚಿತ್ರ ನಟ ದೊಡ್ಡಣ್ಣ ಸಮಾರಂಭದಲ್ಲಿ ಮಾತನಾಡಿದರು. ಈರ್ವರು ಶ್ರೀಗಳನ್ನು ಸಮಿತಿಯವರು ಆದರದಿಂದ ಗೌರವಿಸಿದರು. ಸಮಿತಿ ಅಧ್ಯಕ್ಷ ಬಸವರಾಜ್‌ ಹೊಂಗಲ್‌ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ಮಕ್ಕಳು ಹಲವು ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಮೋದಿಯ ಪ್ರಶಂಸೆ: ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದ ಮೇಲೆ ಜಗತ್ತಿನಲ್ಲಿ ಬಸವಣ್ಣನವರ ಪರಿಚಯ ಹೆಚ್ಚು ಆಗಿದೆ. ಲಂಡನ್‌, ಅಮೇರಿಕಾಕ್ಕೂ ಬಸವಣ್ಣನವರ ವಿಚಾರಗಳು ಈಗ ತಲುಪಿವೆ. ಕನ್ನಡ ಭಾಷೆಯ ಜ್ಞಾನ ಪ್ರಧಾನಿಗಳಿಗೆ ಇದ್ದಿದ್ದರೆ ಅವರು ಇನ್ನಷ್ಟು ಆಳವಾಗಿ ವಚನಗಳನ್ನು ಅರ್ಥ ಮಾಡಿಕೊಳ್ಳು ತ್ತಿದ್ದರು ಎಂದು ಶ್ರೀಗಳು ಪ್ರಶಂಸೆಯ ಮಾತುಗಳನ್ನಾಡಿದರು.