ಬಸವಣ್ಣನವರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರು

| Published : May 01 2025, 12:52 AM IST

ಬಸವಣ್ಣನವರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರು
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ಕೇವಲ ಒಂದು ಧರ್ಮ, ಪಂಗಡಕ್ಕೆ ಸೀಮಿತರಾಗಿರಲಿಲ್ಲ. ಇಡೀ ಮಾನವ ಕುಲಕ್ಕೆ ಸೇರಿದವರಾಗಿದ್ದು ಅವರ ವಚನಗಳು ಸರಳವಾಗಿದ್ದು ಅವುಗಳಲ್ಲಿ ಅಡಗಿರುವ ಸತ್ಯಗಳು ಸಾರ್ವಕಾಲಿಕವಾಗಿವೆ. ಅವರು ಜಾತಿ, ಮತ, ಲಿಂಗಭೇದಗಳನ್ನು ಮೀರಿ ನಿಂತು, ಎಲ್ಲರೂ ಸಮಾನರು ಎಂಬ ಕ್ರಾಂತಿಕಾರಿ ಕಲ್ಪನೆಯನ್ನು ಸಾರಿದರು. ಸಮಾಜ ಸುಧಾರಕ, ಕ್ರಾಂತಿಕಾರಿ ಚಿಂತಕ ಮತ್ತು ಶ್ರೇಷ್ಠ ಮಾನವತಾವಾದಿ ಬಸವಣ್ಣನವರು ತಮ್ಮ ತತ್ವ, ಸಿದ್ಧಾಂತಗಳ ಮೂಲಕ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಸಮಾಜ ಸುಧಾರಕ, ಕ್ರಾಂತಿಕಾರಿ ಚಿಂತಕ ಮತ್ತು ಶ್ರೇಷ್ಠ ಮಾನವತಾವಾದಿ ಬಸವಣ್ಣನವರು ತಮ್ಮ ತತ್ವ, ಸಿದ್ಧಾಂತಗಳ ಮೂಲಕ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು ಕೇವಲ ಒಂದು ಧರ್ಮ, ಪಂಗಡಕ್ಕೆ ಸೀಮಿತರಾಗಿರಲಿಲ್ಲ. ಇಡೀ ಮಾನವ ಕುಲಕ್ಕೆ ಸೇರಿದವರಾಗಿದ್ದು ಅವರ ವಚನಗಳು ಸರಳವಾಗಿದ್ದು ಅವುಗಳಲ್ಲಿ ಅಡಗಿರುವ ಸತ್ಯಗಳು ಸಾರ್ವಕಾಲಿಕವಾಗಿವೆ. ಅವರು ಜಾತಿ, ಮತ, ಲಿಂಗಭೇದಗಳನ್ನು ಮೀರಿ ನಿಂತು, ಎಲ್ಲರೂ ಸಮಾನರು ಎಂಬ ಕ್ರಾಂತಿಕಾರಿ ಕಲ್ಪನೆಯನ್ನು ಸಾರಿದರು.

"ಕಾಯಕವೇ ಕೈಲಾಸ " ಎಂಬ ಅವರ ಘೋಷಣೆ ಶ್ರಮದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ದುಡಿಮೆಯಿಂದ ಘನತೆಯನ್ನು ಪಡೆಯಬಹುದು ಎಂದು ಅವರು ನಂಬಿದ್ದರು. ಈ ತತ್ವವು ಸೋಮಾರಿತನವನ್ನು ತ್ಯಜಿಸಿ, ಸಕ್ರಿಯ ಜೀವನ ನಡೆಸಲು ನಮಗೆ ಪ್ರೇರಣೆ ನೀಡುತ್ತಿದೆ. ಇಡೀ ವಿಶ್ವದಲ್ಲಿಯೇ ಇಬ್ಬರು ಮಹಾನ್ ನಾಯಕರ ದಿನವನ್ನು ಸಂಸತ್ ಭವನದಲ್ಲಿ ಪೂಜಿಸುತ್ತಾರೆ ಎಂದರೆ ಅದು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜಯಂತಿಯಾಗಿದೆ. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿದ್ದರೆ ಇಂದು ದೇಶದಲ್ಲಿ ಯಾವುದೇ ಭಯೋತ್ಪಾದನೆ ಹಾಗೂ ಜಾತಿ ಜಾತಿಗಳ ನಡುವೆ ದ್ವೇಷ ಅಸೂಯೆ ಹುಟ್ಟುತ್ತಿರಲಿಲ್ಲ ಎಂದರು.ತಹಸೀಲ್ದಾರ್‌ ಎಂ ಮಮತಾ ಮಾತನಾಡಿ, ಸಮಾಜದಲ್ಲಿ ಶೋಷಿತರ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಮಹನೀಯರಲ್ಲಿ ನಮ್ಮ ಕಾಯಕ ಯೋಗಿ ಬಸವಣ್ಣ ಪ್ರಮುಖರು. ಯಾವುದೇ ಕಾಯಕ ಮಾಡುವಾಗ ಗುರುವಿನ ಮೂಲಕ ನಾವು ಶರಣರನ್ನು ಕಾಣಬೇಕು. ಇತ್ತೀಚಿಗೆ ನಾವು ಹತ್ತಾರು ಶರಣರ ಜಯಂತಿ ಆಚರಿಸುವ ಮೂಲಕ ಶರಣರ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡುವ ಉದ್ದೇಶದಿಂದ ಇಂತಹ ಶರಣರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಜಾತಿ, ಧರ್ಮ, ಲಿಂಗಭೇದ ಎನ್ನುವ ಸರ್ವಕಾಲಕ್ಕೂ ಶ್ರೇಷ್ಠತೆ ತೋರಿಸಿದ ಮಹನೀಯ ಬಸವಣ್ಣ ಎಂಬುದನ್ನು ಮರೆಯಬಾರದು ಎಂದರು.

ವೀರಶೈವ ಮಹಾಸಭಾದ ಅಧ್ಯಕ್ಷ ಬಸವರಾಜು ಮಾತನಾಡಿ, ಇಂದು ಕಲ್ಯಾಣ ಕ್ರಾಂತಿಯ ಮೂಲಕ ಇಡೀ ವಿಶ್ವವೇ ಬಸವಣ್ಣನವರ ಜಯಂತಿ ಆಚರಿಸುತ್ತಿದೆ. ಯಾವುದೇ ಒಂದು ಜಾತಿ ಎನ್ನದೆ ಪ್ರತಿ ಜನಾಂಗ ನಮ್ಮ ಜಯಂತಿ ಎಂದು ಆಚರಿಸುತ್ತಿದೆ. ಇದರ ಉದ್ದೇಶ ಸಮಾಜದ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ಜಾತಿ ಧರ್ಮಭೇದ ಮರೆತು ಎಲ್ಲರೂ ಒಂದೇ ಎನ್ನುವ ತತ್ವ ಸಾರಿದ ಬಸವಣ್ಣನವರು‌ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ನಡೆಸುತ್ತೇವೆ ಎಂದರು.

ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ವಿಂಪೂ ಸಂತೋಷ್ ಮಾತನಾಡಿ, ಸಾವಿರಾರು ವಚನಗಳನ್ನು ನಮ್ಮ ಶರಣರು ರಚಿಸಿದ್ದಾರೆ ಆದರೆ ಕಾಟಾಚಾರಕ್ಕೆ ಅವರ ವಚನಗಳನ್ನು ಓದುತ್ರೇವೆ ಹೊರತು ವಚನಗಳನ್ನು ನಾವು ಮೈಗೂಡಿಸಿಕೊಳ್ಳುತ್ತಿಲ್ಲ‌. ನಮ್ಮ ಶರಣರ ವಚನಕ್ಕೆ ವಿರುದ್ಧ ಎಂಬಂತೆ ಮನುಷ್ಯರಲ್ಲಿ ಅಹಂಕಾರ ಅಸೂಯೆ ತುಂಬಿರುವ ಇವರ ಜೀವನದಲ್ಲಿ ತತ್ವಾದರ್ಶಗಳು ಎಲ್ಲಿ ಪಾಲನೆ ಆಗುತ್ತದೆ. ಪ್ರಾಮಾಣಿಕವಾಗಿ ಅವರ ತತ್ವಾದರ್ಶಗಳನ್ನು ಪಾಲಿಸಬೇಕು. ನಮ್ಮ ಮನಸ್ಸಿನ ಅಹಂ ಅನ್ನು ತೆಗೆದಾಗ ಮಾತ್ರ ಶಿವಶರಣರು ಹಾಕಿಕೊಟ್ಟ ವಚನಗಳಿಗೆ ಬೆಲೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಇಒ ರಾಜೇಗೌಡ, ಸಿಪಿಐ ರೇವಣ್ಣ, ಯುವ ಘಟಕದ ಅಧ್ಯಕ್ಷ ಚೇತನ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ಶಿವಮರಿಯಪ್ಪ ಇತರರು ಇದ್ದರು.