ಇಂದಿನ ಅಧಿಕಾರಸ್ಥರಿಗೆ ಬಸವಣ್ಣನವರು ಮಾದರಿ

| Published : Nov 22 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರು ತಮಗೆ ದೊರೆತ ಅಧಿಕಾರವನ್ನು ಜನಸೇವೆಯ ಸಾಧನವೆಂದು ಪರಿಗಣಿಸಿದವರು. ಹೀಗಾಗಿ ಇಂದಿನ ಅಧಿಕಾರಸ್ಥರಿಗೆ ಬಸವಣ್ಣನವರು ಮಾದರಿಯಾಗುತ್ತಾರೆ ಎಂದು ಪ್ರೊ.ವಿಜಯಲಕ್ಷ್ಮಿ ಪುಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರು ತಮಗೆ ದೊರೆತ ಅಧಿಕಾರವನ್ನು ಜನಸೇವೆಯ ಸಾಧನವೆಂದು ಪರಿಗಣಿಸಿದವರು. ಹೀಗಾಗಿ ಇಂದಿನ ಅಧಿಕಾರಸ್ಥರಿಗೆ ಬಸವಣ್ಣನವರು ಮಾದರಿಯಾಗುತ್ತಾರೆ ಎಂದು ಪ್ರೊ.ವಿಜಯಲಕ್ಷ್ಮಿ ಪುಟ್ಟಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ಮಾಸಿಕ ಅನುಭವ ಸತ್ಸಂಗದಲ್ಲಿ ಬಸವಣ್ಣ ನಮಗೆ ಏಕೆ ಬೇಕು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರ ನಡೆ ಮತ್ತು ನುಡಿಗಳಲ್ಲಿ ವಿನಯತೆ ಎದ್ದು ಕಾಣುತ್ತಿತ್ತು. ಮೇಲು ಕೀಳು ಎನ್ನದೆ ಎಲ್ಲರನ್ನೂ ಗೌರವಿಸುತ್ತ ಸಮಾನವಾಗಿ ಕಾಣುವ ಅವರು ಎನಗಿಂತ ಕಿರಿಯರಿಲ್ಲ ಎನ್ನುತ್ತಾ ಅಹಂಕಾರದಿಂದ ದೂರ ಇದ್ದವರು. ಇಂದಿನ ಅಧಿಕಾರಸ್ಥರಲ್ಲಿ ಅದು ಕಾಣುತ್ತಿಲ್ಲ. ಅಹಂಕಾರ ಹೆಚ್ಚಾಗಿದೆ. ಅಂದು ಶರಣರು ತಮ್ಮ ಮೌಲ್ಯಗಳಿಂದ ದೊಡ್ಡವರಾಗಿದ್ದರು. ಇಂದು ಅಧಿಕಾರ ಮತ್ತು ಅಂತಸ್ತುಗಳಿಂದ ದೊಡ್ಡವರೆನಿಸಿಕೊಳ್ಳುತ್ತಾರೆ ಎಂದರು.

ಜಾತಿ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಲು ಪ್ರಯತ್ನಿಸಿದವರು ಬಸವಣ್ಣನವರು. ಕೆಳವರ್ಗದವರನ್ನು ಮುಟ್ಟುವುದು ಪಾಪ ಎನ್ನುವಂತಹ ಪರಿಸ್ಥಿತಿಯಲ್ಲಿ ಕೆಳ ವರ್ಗದವರನ್ನು ಶೋಷಿತರನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ಅವರಿಗೆ ಅನುಭವ ಮಂಟಪದಲ್ಲಿ ಸ್ಥಾನಮಾನಗಳನ್ನು ಕೊಟ್ಟು ಗೌರವಿಸಿದರು. ದುರ್ದೈವದ ವಿಚಾರವೆಂದರೆ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲವಾಗಿಲ್ಲ ಎಂದು ವಿಷಾದಿಸಿದರು.

ಇಂದಿನ ಅಧಿಕಾರಸ್ಥರಲ್ಲಿ ಅಂತರಂಗ ಶುದ್ಧವಿಲ್ಲ. ಅದು ಕೇವಲ ಭಾಷಣಗಳಲ್ಲಿ ಬಳಕೆಯಾಗುತ್ತಿದೆ. ಅನಾಚಾರ, ಅತ್ಯಾಚಾರ, ದುರಾಚಾರ ಹೆಚ್ಚಾಗುತ್ತಿದೆ. ಹೀಗಾಗಿ ಬಸವಣ್ಣನವರು ನಮಗೆ ಇಂದಿಗೂ ಬೇಕು. ಅವರ ಮೌಲ್ಯಗಳು ಸಾರ್ವಕಾಲಕ್ಕೂ ಪ್ರಸ್ತುತ ಎನಿಸುವಂಥವು ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಸಮಸ್ತ ಲಿಂಗಾಯತ ಸಮಾಜವು ಒಗ್ಗಟ್ಟಾಗಿ ಇರುವುದು ಈ ಕ್ಷಣಕ್ಕೆ ಅಗತ್ಯವಾಗಿದೆ. ಸಮಾಜದಲ್ಲಿ ಒಗ್ಗಟ್ಟು ಇಲ್ಲವಾದಲ್ಲಿ ದೊಡ್ಡ ಹಾನಿ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಶಿವಬಸವ ದೇವರು ಮಾತನಾಡಿ, ಬಸವಣ್ಣನವರ ಬದುಕು ಉದ್ದಿನ ಕಡ್ಡಿಯಂತೆ. ತಾನೇ ಸುಟ್ಟುಕೊಂಡು ಜಗಕ್ಕೆ ಪರಿಮಳ ಬೀರಿದವರು. ಕಾಯಕ ನಿಷ್ಠೆ ಎನ್ನುವುದನ್ನು ಜೀವನದಲ್ಲಿ ರೂಢಿಸಿಕೊಂಡವರು. ಬಸವಾದಿ ಶರಣರ ಜೀವನವೇ ಒಂದು ಮಾದರಿ. ಎಲ್ಲರೂ ತಮ್ಮ ಜೀವನದಲ್ಲಿ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಅಳವಡಿಸಿಕೊಳ್ಳಬೇಕು ಎಂದರು.

ದಾಸೋಹ ಸೇವೆ ನೀಡಿದ್ದ ಎಂ.ಎ.ಕೋರಿಶೆಟ್ಟಿ ಮತ್ತು ಗೀತಾ ಕೋರಿ ಶೆಟ್ಟಿ ದಂಪತಿಯನ್ನು ಸತ್ಕರಿಸಲಾಯಿತು. ಭಾಗ್ಯಶ್ರೀ ಬೆಣಚನಮರಡಿ ಸ್ವಾಗತಿಸಿದರು. ಸಿ.ಎಂ.ಬೂದಿಹಾಳ ಅತಿಥಿಗಳ ಪರಿಚಯ ಮಾಡಿದರು. ಕಾವೇರಿ ಕಿಲಾರಿ ನಿರೂಪಿಸಿದರು. ಮುರುಗೇಶ ಶಿವಪೂಜಿ ವಂದಿಸಿದರು. ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಪ್ರವೀಣ್ ಚಿಕಲಿ, ಎಸ್.ಜಿ.ಸಿದ್ನಾಳ ಉಪಸ್ಥಿತರಿದ್ದರು.