ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಬಸವಣ್ಣ ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಾದವರಲ್ಲ ಅವರು ಮಾನವಧರ್ಮಕ್ಕೆ ಸೀಮಿತರಾದವರು, ಇಂತಹ ಮಹಾನ್ ನಾಯಕರು ಸಾವಿರಾರು ವಚನಗಳನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ನಾಗಲಾಪುರ ವೀರಧರ್ಮ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟರು. ನಗರದ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿ ಹಾಗೂ ಶರಣೆಯರ ಬಳಗದಿಂದ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಅವರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನ ಅರ್ಥಪೂರ್ಣವಾಗುತ್ತದೆ. ಬಸವಣ್ಣರ ಅಗಲಿಕೆ ೮೯೪ನೇ ವರ್ಷಗಳೆ ಕಳೆದರೂ ಇಡೀ ವಿಶ್ವವೇ ಬಸವಣ್ಣರ ವಚನದ ತತ್ವಗಳ ಆದರ್ಶಗಳನ್ನು ಮಾದರಿಯಾಗಿರಿಸಿಕೊಂಡಿದೆ.
ಬಸವಣ್ಣರ ಜೀವಿತವಧಿಯು ಪರೋಪಕಾರಕ್ಕೆ ಮೀಸಲಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿ ಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂಬ ಮಹತ್ವದ ಸಂದೇಶಕ್ಕೆ ಮೌಲ್ಯವನ್ನು ಕಟ್ಟಲಾಗದು, ವಚನಗಳು ಓದುವುದು ಸುಲಭವಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಕರ, ದುಡಿದು ಸ್ವಾವಲಂಬಿಯಾಗಿ ಬದುಕಬೇಕೆಂಬ ಸಂದೇಶ ಆದಿನಮಾನದಲ್ಲೇ ಬಸವಣ್ಣ ಸಾರಿದ್ದರು ಎಂದು ನೆನಪಿಸಿದರು.ಏ.೩೦ರಂದು ಸರ್ಕಾರದ ಮಟ್ಟದಲ್ಲಿ ಬಸವ ಜಯಂತಿ ಆಚರಿಸಬೇಕೆಂಬ ಆದೇಶ ಸ್ವಾಗತಾರ್ಹ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೀ ಬಸವ ಜಯಂತಿ ಆಚರಣೆ ಮಾಡುವ ಬಸವಣ್ಣರನ್ನು ಸಮ ಸಮಾಜದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಅರ್ಥಪೂರ್ಣವಾಗಿದೆ. ಅಂದಿನ ಬಸವಣ್ಣರ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟ್ ಆಗಿದೆ. ಪಾರ್ಲಿಮೆಂಟ್‌ನಲ್ಲಿ ಬಸವ ಜಯಂತಿ ಆಚರಿಸುತ್ತಿರುವುದು ಪ್ರಜ್ಞಾಪೂರಕ ಬೆಳವಣಿಗೆಯಾಗಿದೆ ಎಂದರು.ಲೇಖಕಿ ಹಾರಿಕ ಮಂಜುನಾಥ್ ಮಾತನಾಡಿ, ಬಸವಣ್ಣ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವಂತ ಕ್ರಾಂತಿ ಮಾಡಿದರು. ಎಲ್ಲವನ್ನು ತ್ಯಾಗ ಮಾಡಿ ಲೋಕದ ಕಲ್ಯಾಣಕ್ಕಾಗಿ ಶ್ರಮಿಸಿದರು. ಸಮಸ್ತ ವೇದಗಳಲ್ಲಿರುವುದು ಬಸವಣ್ಣನವರ ವಚನಗಳಲ್ಲಿದೆ. ವಚನ ಎಂದರೆ ಪ್ರಮಾಣ ಎಂಬ ಅರ್ಥದೊಂದಿಗೆ ನುಡಿದಂತೆ ನಡೆ ಎಂದು ಅರ್ಥೈಸ ಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ವೇದಿಕೆಯ ಮೇಲಿನ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಮೃತರಾದವರಿಗೆ ೨ ನಿಮಿಷ ಮೌನಚರಣೆ ನಡೆಸಲಾಯಿತು. ಎಸ್‌ಡಿಸಿ ಕಾಲೇಜಿನ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ವೀರಗಾಸೆ ಕುಣಿತ ನಡೆಯಿತು. ಶರಣೆಯ ಬಳಗದ ಅಧ್ಯಕ್ಷೆ ಉಷಾಗಂಗಾಧರ್, ಶ್ರೀ ಬಸವೇಶ್ವರ ಭಕ್ತ ಮಂಡಳಿಯ ವಿಮಲ ಬೈಲಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚೆನ್ನಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎನ್.ಆರ್.ಜ್ಞಾನಮೂರ್ತಿ, ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ.ಗಂಗಾಧರ್, ಉಪಾಧ್ಯಕ್ಷ ಕೆ.ಬಿ. ಬೈಲಪ್ಪ ಇದ್ದರು.ದೇವಾಲಯದ ಅರ್ಚಕ ಯಡಿಯೂರಪ್ಪ ಸ್ವಾಮಿರಿಂದ ವೇದ ಘೋಷ, ಶರಣೆಯರ ಬಳಗದಿಂದ ಪ್ರಾರ್ಥನೆ. ಸಂದ್ಯಾ ಕಾರ್ಯಕ್ರಮ ನಿರೂಪಣೆ, ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಕಾರ್ಯದರ್ಶಿ ಎನ್.ಆರ್. ಪ್ರಭಾಕರ್ ಮತ್ತು ಚಿಕ್ಕದೇವಾರಾಜ್ ತಂಡವು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.