ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ: ಈಶ್ವರ ಖಂಡ್ರೆ ಹರ್ಷ

| Published : Jan 19 2024, 01:46 AM IST

ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ: ಈಶ್ವರ ಖಂಡ್ರೆ ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಜಗಜ್ಯೋತಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸರ್ವಾನುಮತದಿಂದ ಅಂಗೀಕಾರ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಸಂಪುಟ ಸಚಿವರಿಗೆ ಈಶ್ವರ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜಗಜ್ಯೋತಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸರ್ವಾನುಮತದಿಂದ ಅಂಗೀಕಾರ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಸಂಪುಟ ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಹಾಗೂ ನೂರಾರು ಮಠಗಳ ಪೀಠಾಧ್ಯಕ್ಷರು, ಹರ ಚರ ಗುರುಮೂರ್ತಿಗಳ ಸಮ್ಮುಖದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಸಮ್ಮೇಳನದಲ್ಲಿ ಬಸವಣ್ಣನವರನ್ನು ಈ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ನಿರ್ಣಯ ಮಾಡಲಾಗಿತ್ತು.

ನಂತರ ಜ.8ರಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ಗದುಗಿನ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು ಹಾಗೂ ತಾವೂ ಸೇರಿದಂತೆ ಹಲವು ಸಚಿವರು, ಸಾಹಿತಿಗಳನ್ನೊಳಗೊಂಡ ನಿಯೋಗ ಸರ್ವ ಸಮುದಾಯದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಿತ್ತು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾಡಿನ ಎಲ್ಲ ಜನತೆಗೆ ಮತ್ತು ಬಸವತತ್ವ ಅನುಯಾಯಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.