ಕನ್ನಡಪ್ರಭ ವಾರ್ತೆ ವಿಜಯಪುರ ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದೆಡೆಗೆ ಕರೆದೊಯ್ದ ಮತ್ತು ಇಂತಹ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಆಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದೆಡೆಗೆ ಕರೆದೊಯ್ದ ಮತ್ತು ಇಂತಹ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಆಲೂರ ಹೇಳಿದರು.

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದಿಂದ ನಗರದಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವ ದರ್ಮ ಇದು ಜಗದ ದರ್ಮ. ಅರಿವು, ಆಚಾರ ಮತ್ತು ಅನುಭಾವ ಇವು ಅದರ ಉತ್ತುಂಗದ ತತ್ವಗಳು. ಅನುಭವ ಮಂಟಪದಲ್ಲಿ ವಿಶ್ವದಲ್ಲೇ ಮೊದಲು ಪ್ರಜಾಪ್ರಭುತ್ವದ ಚಿಂತನೆಗಳು ನೀಡಿದ ಪ್ರಥಮ ಹರಿಕಾರ ಬಸವಣ್ಣನವರು ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಬಳ್ಳಾರಿಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಶಾರದಮ್ಮ ಹಾಗೂ ಧಾರವಾಡದ ಡಾ.ಮೃತ್ಯುಂಜಯ ಶೆಟ್ಟರ ಮಾತನಾಡಿದರು.ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಲಿಂಗಾಯತರು ಉಪಪಂಗಡಗಳ ಸಂಕುಚಿತ ಭಾವ ತೊರೆದು ಬಸವ ಧರ್ಮ ಪಾಲಿಸಬೇಕು ಎಂದರು.

ಹಿರಿಯ ಪತ್ರಕರ್ತ ಇಂದುಶೇಖರ ಮಣೂರ ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳ 21 ಜನ ಸಾಧಕರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ, ವಚನ ಗಾನಕೋಗಿಲೆ ಪ್ರಶಸ್ತಿ ಹಾಗೂ ಬಸವಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ವ್ಹಿ.ಸಿ.ನಾಗಠಾಣ ಮತ್ತು ಸಿದ್ರಾಮಪ್ಪ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು.

ಸಂಘಟನೆಯ ಪದಾಧಿಕಾರಿಗಳಾದ ಪ್ರೊ.ಆರ್‌.ಎಸ್.ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಶಾರದಾಮಣಿ ಹುಣಶ್ಯಾಳ ಸಂದೇಶ ವಾಚಿಸಿದರು. ಶರಣು ಸಬರದ ಸ್ವಾಗತಿಸಿದರು. ಸವಿತಾ ದೇಶಮುಖ ನಿರೂಪಿಸಿದರು. ಸಿದ್ದಪ್ಪ ಪಡನಾಡ ವಂದಿಸಿದರು.

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿವಿಧ ಪದಾಧಿಕಾರಿಗಳಾದ ಶಾರದಾ ಪಾಟೀಲ, ಡಾ.ಸರಸ್ವತಿ ಪಾಟೀಲ, ವಿಜಯಲಕ್ಷ್ಮಿ ಹಂಗರಗಿ, ಉದ್ಯಮಿ ಗಂಗಾಧರ ಸಾಲಕ್ಕಿ, ರತ್ನಾಬಾಯಿ ಬಿರಾದಾರ, ಪುಷ್ಪಾವತಿ ಗೋಟ್ಯಾಳ, ರೇಣುಕಾ ಪಾಟೀಲ, ಬಸವರಾಜ ಕೋರಿ, ಬನಶ್ರೀ ಹತ್ತಿ, ಪ್ರೊ.ಬಿ.ಎಂ.ಬಿರಾದಾರ, ಶೈಲಾ ಮಣೂರ, ಸುಧಾ ಪಾಟೀಲ, ಡಾ.ದಾನಮ್ಮ ಝಳಕಿ, ಗೌರಮ್ಮ ನಾಶಿ ಹಾಗೂ ಇತರ ಶರಣ-ಶರಣೆಯರಿದ್ದರು.ಜಗತ್ತಿನಲ್ಲಿ ಪಶು-ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ಹಾಗೂ ವರ್ಗ ಮತ್ತು ವರ್ಣ ಶ್ರೇಷ್ಠತೆಯನ್ನು ತೆಗೆದುಹಾಕಿದ ಏಕೈಕ ಧರ್ಮ ಬಸವ ಧರ್ಮ. ಜಗತ್ತು ಕಂಡ ಬಹು ದೊಡ್ಡ ದಾರ್ಶನಿಕ ಬಸವಣ್ಣ. ಅವರ ಜನ್ಮಭೂಮಿಯಾದ ವಿಜಯಪುಯದಲ್ಲಿ ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಇಲ್ಲಿಯ ಜನತೆ ಒಕ್ಕೊರಲಿಂದ ಆಗ್ರಹಿಸಬೇಕು.

- ಡಾ.ಶಶಿಕಾಂತ ಪಟ್ಟಣ, ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ