ಸಾರಾಂಶ
ಸಮುದಾಯಗಳನ್ನು ಸಂಘಟಿಸಿ ಭಗವಂತನ ಆರಾಧನೆಗೆ ಬೇಕಾಗಿರುವುದು ನಿಜವಾದ ಭಕ್ತಿಯೇ ಹೊರತು ಆಡಂಬರ ಹಾಗೂ ಶ್ರೀಮಂತಿಕೆಯಲ್ಲ ಎಂಬ ಸತ್ಯ ಸಂದೇಶವನ್ನು ಸಾರಿ ಎಲ್ಲಾ ಜಾತಿ ವರ್ಗಗಳ ಜನರಿಗೆ ಲಿಂಗಾಧರಣೆ ಮಾಡಿಸಿ ಕ್ರಾಂತಿ ಮಾಡುವ ಜೊತೆಗೆ ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
12ನೇ ಶತಮಾನದಲ್ಲಿಯೇ ಸಾಮಾಜಿಕ ಅಸಮಾನತೆ ವಿರುದ್ಧ ಕ್ರಾಂತಿ ನಡೆಸಿ ಜಾತಿ, ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದವರು ಬಸವಣ್ಣ ಎಂದು ಕಾಪನಹಳ್ಳಿ ಗವಿಮಠದ ಶ್ರೀಚನ್ನವೀರ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ದಿವ್ಯ ಸಾನಿಧ್ಯ ವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವೀರಶೈವ ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸಮುದಾಯಗಳನ್ನು ಸಂಘಟಿಸಿ ಭಗವಂತನ ಆರಾಧನೆಗೆ ಬೇಕಾಗಿರುವುದು ನಿಜವಾದ ಭಕ್ತಿಯೇ ಹೊರತು ಆಡಂಬರ ಹಾಗೂ ಶ್ರೀಮಂತಿಕೆಯಲ್ಲ ಎಂಬ ಸತ್ಯ ಸಂದೇಶವನ್ನು ಸಾರಿ ಎಲ್ಲಾ ಜಾತಿ ವರ್ಗಗಳ ಜನರಿಗೆ ಲಿಂಗಾಧರಣೆ ಮಾಡಿಸಿ ಕ್ರಾಂತಿ ಮಾಡುವ ಜೊತೆಗೆ ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿದರು ಎಂದು ಸ್ಮರಿಸಿದರು.ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಆದಿಚುಂಚನಗಿರಿ ಮಠ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಮಠವಾದರೂ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಆಶಯದಂತೆ ಎಲ್ಲಾ ಜಾತಿ ವರ್ಗಗಳನ್ನು ಪ್ರೀತಿಸಿ ಗೌರವಿಸಿ ಸತ್ಕರಿಸುವ ಆದರ್ಶವನ್ನು ಅನುಸರಿಸುತ್ತಾ ಬಂದಿದೆ ಎಂದರು.
ಉದ್ಯಮಿ ಚಂದ್ರಪ್ರಕಾಶ್, ತಾಯಂದಿರ ಕ್ಯಾಂಟೀನ್ ನಡೆಸುತ್ತಿರುವ ಮಹಿಳಾ ಸಾಧಕಿ ತೆಂಡೇಕೆರೆ ವೀಣಾ, ಪ್ರಗತಿಪರ ಕೃಷಿಕ ಕಾರಿಗನಹಳ್ಳಿ ನಾಗರಾಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ದಂತ ವೈದ್ಯ ಡಾ.ನಂದೀಶ್ ಹಾಗೂ ಕಳೆದ 35 ವರ್ಷಗಳ ಹಿಂದೆಯೇ ಮುಸ್ಲಿಂ ಯುವತಿ ಮದುವೆಯಾಗಿ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಜೀವವಿಮಾ ಪ್ರತಿನಿಧಿ ಕೆ.ಎಸ್.ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಆರ್.ಟಿ.ಓ ಮಲ್ಲಿಕಾರ್ಜುನ, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಸಾಧಕರನ್ನು ಕುರಿತು ಮಾತನಾಡಿದರು. ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ನಂಜಪ್ಪ, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಪ್ರಾಂಶುಪಾಲ ಪ್ರಸಾದೇಗೌಡ, ರಾಮಚಂದ್ರ ಹಲವರು ಭಾಗವಹಿಸಿದ್ದರು.