ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬ್ರಹ್ಮಾಂಡದ ಕತ್ತಲೆಯನ್ನು ಓಡಿಸುವ ಶಕ್ತಿ ಸೂರ್ಯನಿಗೆ ಇದೇ ರೀತಿ ಈ ಸಮಾಜದಲ್ಲಿನ ಕತ್ತಲು ಎಂಬ ಮೂಢನಂಬಿಕೆ, ಅಜ್ಞಾನ,ಜಾತಿಯತೆ ಎಂಬ ಕತ್ತಲು ಸೇರಿದಂತೆ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳಿದ್ದವು ಇಂತಹ ಸಮಸ್ಯೆಗಳ ಕತ್ತಲನೆಯನ್ನು ಹೊಡೆದೊಡಿಸಿ ಇಡೀ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಿದವರು ಜಗಜ್ಯೋತಿ ಬಸವಣ್ಣನವರು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಅಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರಾಂತಿಯೋಗಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.

ದೇಶದ ಇತಿಹಾಸದಲ್ಲಿ ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ಬಿಟ್ಟುಹೋಗಿರುವ ಆದರ್ಶಗಳಿಂದಾಗಿ ಇಂದು ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಜನ ಬದುಕುವಂತಾಗಿದೆ ಎಂದರು.

ನಾಡಿನ ಇತಿಹಾಸದಲ್ಲಿ ಬಂದು ಹೋಗಿರಿವ ಸುಮಾರು 32 ಮಾಹಾತ್ಮರ ಜಯಂತಿಗಳನ್ನು ಆಚರಿಸಲು ಸರ್ಕಾರ ಆದೇಶ ಮಾಡಿರುವ ಉದ್ದೇಶ ಇಂದಿನ ಪೀಳಿಗೆಯವರು ಕೊನೆ ಪಕ್ಷ ಇಂತಹ ಮಹಾನ್ ಪುರುಷರ ಜೀವನ ಸಾಧನೆಗಳನ್ನು ತಿಳಿದುಕೊಳ್ಳಬೇಕು ಎನ್ನುವುದಾಗಿದೆ ಆದರೆ ಇಂದು ಮಾಹತ್ಮರ ಮಾರ್ಗದರ್ಶನ, ಆಚರಣೆ ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಎಂದು ಹೇಳಿದರು.


ಆಚರಣೆಗೆ ಅಧಿಕಾರಿಗಳ ಗೈರು, ಶಾಸಕರು ಗರಂ:

ಸೋಮವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಶಾಸಕ ಡಿ.ಜಿ.ಶಾಂತನಗೌಡರು ಆಗಮಿಸಿ ಅಧಿಕಾರಿಗಳಿಗಾಗಿ ಕೆಲ ಕಾಲ ಕಾಯುವಂತಾಯಿತು. ನಂತರ ಗ್ರೇಡ್ -2 ತಹಸೀಲ್ದಾರ್ ಸುರೇಶ್ ಹಾಗೂ ಕೆಲ ಮುಖಂಡರು ಆಗಮಿಸಿದರೇ ಹೊರತು ಗ್ರೇಡ್ -1 ತಹಸೀಲ್ದಾರ್ ಹಾಗೂ ಉಪವಿಗಾಧಿಕಾರಿ ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು, ಇದರಿಂದ ಶಾಸಕರು ಬೇಸರಗೊಂಡ ಪ್ರಸಂಗ ನಡೆಯಿತು.

ಕಾರ್ಯಕ್ರಮದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ಮಹಾನ್ ಸಾಂಸ್ಕೃತಿಕ ನಾಯಕ ಬಸವಣ್ಣ ಕೇವಲ ಧಾರ್ಮಿಕ ನಾಯಕರಾಗಿರದೇ ಸಮಾಜ ಸುಧಾಕರೂ ಅಗಿದ್ದರು. ಅವರು ಸಮಾನತೆ, ಸತ್ಯ ಮತ್ತು ನೀತಿಯ ಜೀವನವನ್ನು ಸಾರಿದರು ಎಂದು ಹೇಳಿದರು.

ಎಸ್‌ಎಂಎಫ್‌ಸಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಕೆ.ನಾಗೇಶ್ ಅವರು ಬಸವಣ್ಣನವರು ಬದುಕು, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.

ಗ್ರೇಡ್ -2 ತಹಸೀಲ್ದಾರ್ ಸುರೇಶ್, ಶಿಕ್ಷಣ ಇಲಾಖೆಯ ಅರುಣ್ ಕುಮಾರ್, ಮುಖಂಡರಾದ ಆರ್.ನಾಗಪ್ಪ ಸಾಯಿಹಾಲೇಶ್, ಚನ್ನವೀರಪ್ಪಗೌಡ ಬಾಬು, ಪತ್ರಕರ್ತ ಎನ್.ಕೆ.ಆಂಜನೇಯ ಸೇರಿ ಮುಖಂಡರು ಇದ್ದರು.