ಸಮ ಸಮಾಜದ ನಿರ್ಮಾಣಕ್ಕೆ ಮತ್ತೆ ಬಸವಣ್ಣ ಬರಬೇಕಿದೆ: ವೈ.ಎಸ್.ವಿ.ದತ್ತ

| Published : Aug 24 2025, 02:00 AM IST

ಸಮ ಸಮಾಜದ ನಿರ್ಮಾಣಕ್ಕೆ ಮತ್ತೆ ಬಸವಣ್ಣ ಬರಬೇಕಿದೆ: ವೈ.ಎಸ್.ವಿ.ದತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು,ಸಮ ಸಮಾಜದ ಶ್ರೇಣೀಕೃತ ಸಮಾಜ ವ್ಯವಸ್ಥೆಗೆ ಎಲ್ಲ ವರ್ಗಗಳನ್ನು ಬೆಸೆಯಬೇಕಾದ ಅಗತ್ಯವಿದೆ. ಶೋಷಿತರು, ಬಡವರಲ್ಲಿ ಸ್ವಾಭಿಮಾನದ ಬದುಕಿನ ಸಮನ್ವಯವಾಗಬೇಕು ಎಂಬುದು ಬಸವಣ್ಣನವರ ಆಶಯ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ಜಿ.ತಿಮ್ಮಾಪುರದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ- ಶರಣರ ಸಂದೇಶ ಸಮಾರೋಪ

ಕನ್ನಡಪ್ರಭ ವಾರ್ತೆ, ಕಡೂರು

ಸಮ ಸಮಾಜದ ಶ್ರೇಣೀಕೃತ ಸಮಾಜ ವ್ಯವಸ್ಥೆಗೆ ಎಲ್ಲ ವರ್ಗಗಳನ್ನು ಬೆಸೆಯಬೇಕಾದ ಅಗತ್ಯವಿದೆ. ಶೋಷಿತರು, ಬಡವರಲ್ಲಿ ಸ್ವಾಭಿಮಾನದ ಬದುಕಿನ ಸಮನ್ವಯವಾಗಬೇಕು ಎಂಬುದು ಬಸವಣ್ಣನವರ ಆಶಯ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ತಾಲೂಕಿನ ಜಿ.ತಿಮ್ಮಾಪುರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಶ್ರಾವಣ ಸಂಜೆ- ಶರಣರ ಸಂದೇಶ ಸಮಾರೋಪದಲ್ಲಿ ನಮ್ಮ ನಡೆ-ಕಲ್ಯಾಣದೆಡೆಗೆ ವಿಷಯ ಕುರಿತು ಉಪನ್ಯಾಸ ನೀಡಿದರು.ಜಾತಿ ಮೇಲಾಟ, ಅಸಮಾನತೆ, ಚಿಂತನೆಗಳ ವೈಪರೀತ್ಯ, ಧರ್ಮೋದ್ರೇಕ ಹಾಗೂ ಮೌಢ್ಯಗಳ ಸಂಕೋಲೆಯಲ್ಲಿರುವ ನಮ್ಮನ್ನು ಎಚ್ಚರಿಸಲು ಬಸವಣ್ಣ ಮತ್ತೆ ಬರಬೇಕಾಗಿದೆ. ಅವರ ಚಿಂತನೆ ನಮಗೆ ದಾರಿದೀಪ ವಾಗಬೇಕು. ಸಂಪತ್ತಿನ ಸಂಗ್ರಹ ಅಪರಾಧ, ಈ ಉದ್ದೇಶದಿಂದ ಕೆಳ ವರ್ಗದವರನ್ನು ಅಪ್ಪಿಕೊಳ್ಳುವ, ಆಳುವ ಅರಸನ ಹಂಗು ತನಗಿಲ್ಲ ಎನ್ನುವ ದಿಟ್ಟತನ ತೋರುವ ಮೂಲಕ ಅರಮನೆಗೆ ಪರ್ಯಾಯವಾಗಿ ಮಹಾಮನೆ ಸ್ಥಾಪಿಸಿದ ಬಸವಣ್ಣನ ಚಿಂತನೆ, ವಿಚಾರಧಾರೆ ರೋಮಾಂಚನಕಾರಿ ಮತ್ತು ಇಂದಿಗೂ ಪ್ರಸ್ತುತ ಎಂದು ವಿಶ್ಲೇಷಿಸಿದರು. ಇಂಗ್ಲೆಂಡಿನಲ್ಲಿ 13ನೇ ಶತಮಾನ, ಫ್ರಾನ್ಸ್ನಲ್ಲಿ 18 ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂತು, ರಷ್ಯಾದಲ್ಲಿ 20 ನೇ ಶತಮಾನದಲ್ಲಿ ಕಾರ್ಮಿಕರ ಕ್ರಾಂತಿ ಆಯಿತು. ನಮಗೆ ನಮ್ಮ ಯೋಗ್ಯತೆಯೇ ತಿಳಿದಿಲ್ಲ, ಬಡವರ, ಕಾರ್ಮಿಕರ, ದಲಿತರ ಮತ್ತು ಶೋಷಿತರ ಅಭ್ಯುದಯಕ್ಕೆ ಪ್ರಜಾಪ್ರಭುತ್ವ, ಸ್ವಾತಂತ್ರ,ಸಮಾನತೆ ಜಾರಿಗೆ ಕಲ್ಯಾಣದಲ್ಲಿ ಬಸವಣ್ಣ 12 ನೇ ಶತಮಾನ ದಲ್ಲಿಯೇ ಅನುಭವ ಮಂಟಪದ ಮೂಲಕ ನಾಂದಿ ಹಾಡಿದ್ದರು. ಇಂದು ನಾವು ಸ್ವಾತಂತ್ರ ಪಡೆದು, ವೈಜ್ಞಾನಿಕ ವಾಗಿ ಮುಂದುವರಿದಿದ್ದೇವೆ. ಹಾಗೆ ನೋಡಿದರೆ ನಾವು 30ನೇ ಶತಮಾನದ ಬಗ್ಗೆ ಚಿಂತನೆ ನಡೆಸಬೇಕಿತ್ತು. ಆದರೆ ನಾವು ಹಿಮ್ಮುಖ ವಾಗಿ ಶರಣರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಾವು ಪ್ರಗತಿಪರರೇ ಎನ್ನುವ ಆತ್ಮಾವಲೋಕನ ಆಗಬೇಕಾದ ಸ್ಥಿತಿ ಏಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳರಸರ ಗುಲಾಮರಾಗುತ್ತಿದ್ದೇವೆ. ಕೀಳರಿಮೆಯಿಂದ ಬಳಲುತ್ತಿ ದ್ದೇವೆ. ಅಂದಿನವರ ದಿಟ್ಟತನ ನಮಗಿಲ್ಲ. ಅದಕ್ಕಾಗಿಯೇ ನಮಗೆ ಮಾರ್ಗದರ್ಶಕರಾಗಿ ಬಸವಣ್ಣ ಗೋಚರಿಸುತ್ತಾರೆ. ಗಾಂಧೀಜಿ-ಅಂಬೇಡ್ಕರ್ ಈ ಸೂತ್ರ ಗಳನ್ನು ಅನುಸರಿಸಿ ಬೆಳಕಾದರು ಎಂದು ನುಡಿದರು.ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬಸವ ತತ್ವ ಜನಮನದಲ್ಲಿ ಸ್ಥಾಯಿಯಾಗಿ ಬದುಕಿನಲ್ಲಿ ಜಂಗಮವಾಗಬೇಕು. ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ಬಸವ ತತ್ವದ ಬೀಜ ಬಿತ್ತುವ, ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಚಿಂತನೆ ಸಾರ್ಥಕತೆ ಕಾಣುವಲ್ಲಿ ಯಶಸ್ವಿಯಾಗುತ್ತಿದೆ. ಅರಿವಿನ ಜಾಗೃತಿ ಮೂಡಿಸುತ್ತಿ ರುವುದಕ್ಕಾಗಿ ಶರಣ ಸಾಹಿತ್ಯ ಪರಿಷತ್ ಅಭಿನಂದನಾರ್ಹರು. ಶರಣರು ವಚನಗಳನ್ನು ಲೋಕ ತಿದ್ದಲು ಹೇಳಿಲ್ಲ. ನಡೆ-ನುಡಿ ಒಂದಾಗಿ ಬದುಕಿನ ಸುಧಾರಣೆ ಆಗದಿದ್ದರೆ ಫಲವಿಲ್ಲ ಎಂದು ಚಿಂತಿಸಿ ಅದರಂತೆ ನಡೆದವರು. ಕತ್ತಲೆ ಯಿಂದ ಬೆಳಕಿನ ಕಡೆ ಹೋಗುವ, ಮಹಾಬೆಳಕಿನಲ್ಲಿ ವ್ಯಕ್ತಿತ್ವ ಬೆಳಗಿಸಿಕೊಂಡು ಸುಗಂಧ ಬೀರುವವರಾಗೋಣ ಎಂದು ಕರೆ ನೀಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ವಚನ ಸಾಹಿತ್ಯ ಸ್ವಾರ್ಥದ ಆಸೆಯಿಂದ ರಚಿತ ವಾಗಿಲ್ಲ. ವಚನಗಳು ಶರಣರ ಆತ್ಮ ಕಲ್ಯಾಣದ ಜತೆ ಲೋಕ ಕಲ್ಯಾಣದ ಚಿಂತನೆ, ಅದ್ಭುತ ಜೀವನ ಮೌಲ್ಯದ ಅನುಭಾವದಲ್ಲಿ ಅರಳಿದ ಅನರ್ಘ್ಯ ರತ್ನ. ಮಾನವನ ಸಮಗ್ರ ವಿಕಾಸ ಮತ್ತು ನೈತಿಕ ಜೀವನ ಮೌಲ್ಯಗಳ ಆವಿಷ್ಕಾರವಾದ ವಚನಗಳು ಜೀವನ ಆದರ್ಶದ ಸಪ್ತಸೂತ್ರಗಳ ಸಂವಿಧಾನವೇ ಆಗಿದೆ. ಪ್ರಜಾಪ್ರಭುತ್ವದ ಸಂವಿಧಾನ ಬದಲಾಗಬಹುದು ಆದರೆ ಈ ಸಪ್ತ ಸೂತ್ರಗಳ ಜೀವನ ಸಂವಿಧಾನ ಎಂದಿಗೂ ಪ್ರಸ್ತುತ, ಶರಣರು ಸಮಾಜಕ್ಕೆ ನೀಡಿದ ನೀತಿ ಸಂಹಿತೆ ಎಂದು ಬಣ್ಣಿಸಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಡಾ.ಬಸವರಾಜ ನೆಲ್ಲಿಸರ, ಶಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಗಾಂಜಿ, ಎಂ.ಆರ್. ಮರುಳಪ್ಪ, ಎಂ.ಆರ್. ರಂಗಪ್ಪ, ಕದಳಿ ವೇದಿಕೆಯ ಸುಜಾತಾ ಜಡೆಮಲ್ಲಪ್ಪ, ಹೊಸೂರು ಪುಟ್ಟರಾಜು, ಯಗಟಿ ಸತೀಶ್, ಎಂ.ಆರ್. ಪ್ರಕಾಶ್, ಸಂಪತ್‌ಕುಮಾರ್, ಶೈಲಾ ಶಿವಣ್ಣ, ಸುನೀತಾ, ಉಮಾದೇವಿ, ಎನ್.ಪಿ.ಮಂಜುನಾಥ ಪ್ರಸನ್ನ, ಪಿ.ಸಿ.ಗಂಗಾಧರ ವಿವಿಧ ಹೋಬಳಿ ಅಧ್ಯಕ್ಷರು, ಜಿ.ತಿಮ್ಮಾಪುರ ಗ್ರಾಮಸ್ಥರು ಇದ್ದರು.23ಕೆೆಕೆಡಿಯು3.ಕಡೂರು ತಾಲ್ಲೂಕಿನ ಜಿ.ತಿಮ್ಮಾಪುರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ " ಶ್ರಾವಣ ಸಂಜೆ- ಶರಣರ ಸಂದೇಶ'''''''' ಸಮಾರೋಪ ಕಾರ್ಯಕ್ರಮವನ್ನು ಸಾಣೇಹಳ್ಳಿಯಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ವೈ.ಎಸ್.ವಿ.ದತ್ತ, ಡಾ.ಸಿ.ಸೋಮಶೇಖರ, ಕೆ.ವಿರೂಪಾಕ್ಷಪ್ಪ, ಯಗಟಿ ಸತೀಶ್ ಇದ್ದರು.