ಬಸವಣ್ಣನವರು ಕೇವಲ ಭಕ್ತಿಯನ್ನಷ್ಟೇ ಬೋಧಿಸಿದವರಲ್ಲ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ ಮಹಾನ್ ಸಮಾಜ ಸುಧಾರಕರು. ಅವರ ವಚನಗಳಲ್ಲಿ ಅವರು ಬಯಸಿದ ಸಮಾಜದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಬಸವಣ್ಣನವರು ಕಟ್ಟಬಯಸಿದ ಸಮಾಜವು ಜಾತಿ-ಭೇದವಿಲ್ಲದ, ಮೇಲು-ಕೀಳುಗಳಿಲ್ಲದ, ಸ್ತ್ರೀ-ಪುರುಷ ಸಮಾನತೆಯ, ಕಾಯಕಕ್ಕೆ ಗೌರವ ನೀಡುವ, ದಾಸೋಹವನ್ನು ಪಾಲಿಸುವ, ಸತ್ಯ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವಾಗಿತ್ತು.
ಕನ್ನಡಪ್ರಭವಾರ್ತೆ, ಹಾಸನ
ಬಸವಣ್ಣನವರು ಆಡಂಬರದ ಪೂಜೆ ಬದಲು ಸತ್ಯ, ಪ್ರಾಮಾಣಿಕತೆ ಮತ್ತು ಸತ್ಕಾರ್ಯಕ್ಕೆ ಮಹತ್ವ ನೀಡಿದರು. ಮನುಷ್ಯನು ಕಳ್ಳತನ, ಹಿಂಸೆ, ಸುಳ್ಳು, ದ್ವೇಷ, ಅಹಂಕಾರ ಮತ್ತು ಪರನಿಂದೆಗಳಿಂದ ದೂರವಿರಬೇಕು ಎಂದು ಬೋಧಿಸಿದರು ಎಂದು ಸೀಗೆನಾಡಿನ ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಹಾಸನ ನಗರದ ಬಸವಕೇಂದ್ರ ಮತ್ತು ಬಸವ ಸಮಿತಿ ವತಿಯಿಂದ ನಗರದ ಯುನೈಟೆಡ್ ಅಕಾಡೆಮಿಯ ಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಚಿಂತನ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣ ಹೊರಗಿನ ಆಡಂಬರಕ್ಕಿಂತ ಒಳಗಿನ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಮನುಷ್ಯನ ದೇಹ ಮತ್ತು ಮನಸ್ಸು ಪವಿತ್ರವಾಗಿದ್ದರೆ ಅದೇ ನಿಜವಾದ ದೇವಾಲಯ ಎಂಬುದು ಇದರ ಅರ್ಥ. ಇಂತಹ ನಡತೆಯುಳ್ಳ ಜನರಿಂದ ಕೂಡಿದ ನೈತಿಕ ಮತ್ತು ಶಾಂತಿಯುತ ಸಮಾಜವನ್ನು ಅವರು ಬಯಸಿದ್ದರು. ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಮುಂತಾದ ಶರಣೆಯರ ಉಪಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ. ತನು ಸೇವೆಗೆ, ಮನ ಶುದ್ಧ ಭಾವನೆಗೆ, ಧನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸ್ವಾರ್ಥಕ್ಕಾಗಿ ಬದುಕದೆ, ಕಾಯಕದ ಮೂಲಕ ಸಂಪಾದಿಸಿ ದಾಸೋಹದ ಮೂಲಕ ಸಮಾಜಕ್ಕೆ ಅರ್ಪಿಸುವುದೇ ಸಾರ್ಥಕ ಜೀವನ. ಬಸವಣ್ಣನವರ ದೃಷ್ಟಿಯಲ್ಲಿ ದಾಸೋಹವು ದಾನಕ್ಕಿಂತ ವಿಶಾಲವಾದುದು ಎಂದು ವಿವರಿಸಿದರು.
ಪ್ರಧಾನ ಭಾಷಣಕಾರರಾಗಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಬಸವಣ್ಣನವರು ಕೇವಲ ಭಕ್ತಿಯನ್ನಷ್ಟೇ ಬೋಧಿಸಿದವರಲ್ಲ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ ಮಹಾನ್ ಸಮಾಜ ಸುಧಾರಕರು. ಅವರ ವಚನಗಳಲ್ಲಿ ಅವರು ಬಯಸಿದ ಸಮಾಜದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಬಸವಣ್ಣನವರು ಕಟ್ಟಬಯಸಿದ ಸಮಾಜವು ಜಾತಿ-ಭೇದವಿಲ್ಲದ, ಮೇಲು-ಕೀಳುಗಳಿಲ್ಲದ, ಸ್ತ್ರೀ-ಪುರುಷ ಸಮಾನತೆಯ, ಕಾಯಕಕ್ಕೆ ಗೌರವ ನೀಡುವ, ದಾಸೋಹವನ್ನು ಪಾಲಿಸುವ, ಸತ್ಯ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವಾಗಿತ್ತು ಎಂದು ಹೇಳಿದರು.ಹಾಸನ ಬಸವಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾನು ದುಡಿದು ಗಳಿಸಿದುದರಲ್ಲಿ ಅಗತ್ಯಕ್ಕಿಂತ ಹೆಚ್ಚಿನದನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು. ಸ್ವಾರ್ಥವಿಲ್ಲದೆ ಇತರರ ಹಿತಕ್ಕಾಗಿ ಬದುಕುವುದು ಬಸವಣ್ಣನವರ ದಾಸೋಹದ ತತ್ವ. ಬಸವಣ್ಣನವರ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದು ಬದುಕಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆ ಇರಬಾರದು. ಕಾಯಕವೇ ಕೈಲಾಸ ಈ ಮಾತಿನ ಮೂಲಕ ಬಸವಣ್ಣನವರು ದುಡಿಮೆಯೇ ದೇವರ ಆರಾಧನೆ ಎಂಬ ಸಂದೇಶ ನೀಡಿದರು. ಕೆಲಸ ಮಾಡುವವನನ್ನು ಕೀಳಾಗಿ ಕಾಣದೆ, ಅವನ ಕಾಯಕಕ್ಕೆ ಗೌರವ ನೀಡಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಯುನೈಟೆಡ್ ಅಕಾಡೆಮಿಯ ಆರ್. ಇ. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಶಿವನಂಜೇಗೌಡ, ರತ್ನ ಸೋಮಶೇಖರ್, ದೇವಿರಮ್ಮ, ಸವರ್ಣ ರಾಮಚಂದ್ರ ಅವರು ವಚನ ಗಾಯನ ನಡೆಸಿಕೊಟ್ಟರು. ವೇದಿಕೆಯಲ್ಲಿ ವೃತ್ತಿಯಿಂದ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಶಿಕ್ಷಣ ಇಲಾಖೆ ಪಾಲಾಕ್ಷಮ್ಮ ಮೋಹನ್ ರಾಜ್, ದೇವಿರಮ್ಮ ಹರೀಶ್, ಬಸವರಾಜ್, ವಿಜಯ ಶಿವರುದ್ರಪ್ಪ, ಪುಟ್ಟಪ್ಪ, ಚಂದ್ರಮೌಳಿ, ಕೆ.ಎಂ. ಪ್ರಕಾಶ್, ಮಲ್ನಾಡ್ ಕಾಲೇಜಿನ ಅಧೀಕ್ಷಕ ಕಟ್ಟಾಯ ಶಿವಕುಮಾರ್, ನಿವೃತ್ತ ಪ್ರಾಂಶುಪಾಲರಾದ ಜಯಶೀಲ, ಅಕಾಶವಾಣಿ ಮುಖ್ಯಸ್ಥ ವಿಜಯ ಅಂಗಡಿ, ಮಹಾನಗರ ಪಾಲಿಕೆ ಅಭಿಯಂತರರಾದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಡಾ. ಪ್ರೊ. ತಿಮ್ಮೇಶ್, ಡಾ. ಗುರುರಾಜ್ ಯಲಗಚ್ಚಿನವರ್, ಅಖಿಲ ಭಾರತೀಯ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷೆ ಮಮತಾ ಪಾಟೀಲ, ಭಾರತ್ ಸ್ಕೌಟ್ಸ್ ಗೈಡ್ಸ್ ಹಾಸನ ಜಿಲ್ಲಾ ಉಪಾಧ್ಯಕ್ಷೆ ಎಂ.ಬಿ. ಗಿರಿಜಾಂಬಿಕ, ಲೆಕ್ಕಪರಿಶೋಧಕ ಎಸ್.ಎನ್. ಜಗದೀಶಪ್ಪ ಸೇರಿದಂತೆ ಹಲವರು ಇದ್ದರು.