33 ವರ್ಷದ ಬಳಿಕ ಭಾರೀ ಜನಸ್ತೋಮದೊಂದಿಗೆ ಜರುಗಿದ ಬಸವಣ್ಣ ರಥೋತ್ಸವ

| Published : Apr 07 2025, 12:31 AM IST

33 ವರ್ಷದ ಬಳಿಕ ಭಾರೀ ಜನಸ್ತೋಮದೊಂದಿಗೆ ಜರುಗಿದ ಬಸವಣ್ಣ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವೀರಭದ್ರೇಶ್ವರ ದೇವಸ್ಥಾನದ ನೂತನ ರಥದ ಲೋಕಾರ್ಪಣೆ ಹಾಗೂ ರಥೋತ್ಸವಕ್ಕೆ ಭಾನುವಾರ ಸಂಜೆ ಶಾಸ್ತ್ರೋತ್ತರವಾಗಿ ಚಾಲನೆ ದೊರೆತಿದೆ

ಮುಂಡಗೋಡ: ೩೩ ವರ್ಷಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಬಸವಣ್ಣ, ವೀರಭದ್ರೇಶ್ವರ ದೇವಸ್ಥಾನದ ನೂತನ ರಥದ ಲೋಕಾರ್ಪಣೆ ಹಾಗೂ ರಥೋತ್ಸವಕ್ಕೆ ಭಾನುವಾರ ಸಂಜೆ ಶಾಸ್ತ್ರೋತ್ತರವಾಗಿ ಚಾಲನೆ ದೊರೆತಿದೆ. ಭಾರೀ ಜನಸ್ತೋಮದೊಂದಿಗೆ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ದೇವಾಲಯದಿಂದ ಹೊರಟ ಬಸವಣ್ಣನ ರಥೋತ್ಸವ ಮೆರವಣಿಗೆ ಪಟ್ಟಣದ ಬಸವನಬೀದಿ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಪಂಚವಾದ್ಯ, ಡೊಳ್ಳು ಕುಣಿತ, ನೃತ್ಯ ಮತ್ತು ವೇಷಭೂಷಣಗಳ ಜೊತೆಗೆ ಜಾಂಜ್ ಮೇಳ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ಬನ್ನಿ ಮಹಾಕಾಳಿ ದೇವಸ್ಥಾನದವರೆಗೂ ಸಾಗಿತು. ಮಾರ್ಗದುದ್ದಕ್ಕೂ ಸಹಸ್ರ ಭಕ್ತರು ರಥದ ಮೇಲೆ ಬಾಳೆ ಹಣ್ಣು, ಉತ್ತತ್ತಿ, ದವಸ ಧಾನ್ಯ ಸೇರಿದಂತೆ ವಿವಿಧ ಹಣ್ಣು ಹಂಪಲುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನೀಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಪುರುಷರು ಮಹಿಳೆಯರು ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥ ಬೀದಿ ಜನಜಂಗುಳಿಯಿಂದ ಕೂಡಿತ್ತು.

ಬಾಗಲಕೋಟೆ ಕಲಾದಗಿ ಪಂಚಗೃಹ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ನವಲಗುಂದ ಗವಿಮಠದ ಬಸವಲಿಂಗ ಶ್ರೀ, ವೇದಮೂರ್ತಿ ರುದ್ರಮುನಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಶಿವರಾಮ ಹೆಬ್ಬಾರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಳೆಯಲ್ಲಿಯೇ ಭಕ್ತಿಯ ಪರಾಕಾಷ್ಠೆ:

ರಥೋತ್ಸವ ನಡೆಯುವ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ ಅಂಜದ ಭಕ್ತರು ಮಳೆಯಲ್ಲಿಯೇ ರಥೋತ್ಸವದಲ್ಲಿ ಪಾಲ್ಗೊಂಡ ತಮ್ಮ ಪ್ರಾಮಾಣಿಕ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.