ಸಾರಾಂಶ
ಪಾಪ ಮತ್ತು ಪುಣ್ಯಗಳ ಮಧ್ಯೆ ವಚನ ಚಳವಳಿಯ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲಿದ ಬಸವಣ್ಣ ಅನುಭವ ಮಂಟಪದ ಮೂಲಕ ಜಗತ್ತಿನ ಗಮನ ಸೆಳೆದರು
ಹಾವೇರಿ: ನಿಂದಿಸುವ ಮತ್ತು ಸ್ತುತಿಸುವ ಇಬ್ಬರನ್ನೂ ಹೊಂದಿರುವ ಸಮಾಜದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸಿದವರು ವಿಶ್ವಗುರು ಬಸವಣ್ಣನವರು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಬಸವಕೇಂದ್ರ ಹೊಸಮಠದಲ್ಲಿ ಶೂನ್ಯ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಜರುಗಿದ ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿನ ಗಮನ ಸೆಳೆದ ಕಾರ್ಲ್ ಮಾರ್ಕ್ಸ್, ಲೋಹಿಯಾ, ನೆಲ್ಸನ್ ಮಂಡೇಲಾ, ಅಬ್ರಹಾಂ ಲಿಂಕನ್, ಗಾಂಧೀಜಿ, ಅಂಬೇಡ್ಕರ್ ಅವರಲ್ಲೂ ವೈಚಾರಿಕತೆ ಸಂದೇಶಗಳು ಜೀವನದ ಮೌಲ್ಯಗಳಿವೆ ಎಂದರು.ಪಾಪ ಮತ್ತು ಪುಣ್ಯಗಳ ಮಧ್ಯೆ ವಚನ ಚಳವಳಿಯ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲಿದ ಬಸವಣ್ಣ ಅನುಭವ ಮಂಟಪದ ಮೂಲಕ ಜಗತ್ತಿನ ಗಮನ ಸೆಳೆದರು. ಕಾಯಕವೇ ಕೈಲಾಸ ಎಂಬ ದುಡಿಯುವ ವರ್ಗದ ಜೀವಾಳವನ್ನು ರೂಢಿಸಿಕೊಂಡವರು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದ್ದ ಬಸವಣ್ಣನವರು ಮಹಿಳೆಯರಿಗೆ ಸಮಾನ ಅವಕಾಶ ನೀಡಿದರು. ಸಾಮಾನ್ಯರ ಬಗ್ಗೆ ಸದಾ ಸ್ಪಂದಿಸುತ್ತಿದ್ದರು. ವಚನಗಳನ್ನು ಜನರಿಗೆ ಮನದಟ್ಟು ಮಾಡಿದರು. ಹೊಸಮಠ ಮತ್ತು ಪೂಜ್ಯರ ಸೇವೆ ಅನನ್ಯವಾಗಿದೆ ಎಂದರು.ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಹೊಸಮಠ ಸದಾಕಾಲ ಮೂಢನಂಬಿಕೆ ಕಂದಾಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೇಂದ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಯಕ ದಿನ ನಿಮಿತ್ತ ಪೌರಕಾರ್ಮಿಕರಾದ ಬಸವರಾಜ ಗಾಳೆಪ್ಪನವರ, ಸುಭಾಷ್ ಹೊನ್ನಮ್ಮನವರ, ಪ್ರಕಾಶ ಹೆಗ್ಗೇರಿ, ಸವಿತಾ ಸಮಾಜದ ಲಕ್ಷ್ಮಣ ರಾಯಚೂರು, ಬ್ಯೂಟಿ ಪಾರ್ಲರ್ ರೇಣುಕಾ ಕರಿಗಾರ, ಕಟ್ಟಡ ನಿರ್ಮಾಣ ಕಾರ್ಮಿಕರಾದ ರಿಯಾಜ್ ಅಹ್ಮದ್ ಹಾಗೂ ಮಕ್ಬೂಲ್ ಮಾಣಿ, ಅಡುಗೆ ತಯಾರಕ ಪರಮೇಶಯ್ಯ ಹಿರೇಮಠ ಮತ್ತು ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಮಮತಾ ನಂದಿಹಳ್ಳಿ ಹಾಗೂ ಅಕ್ಕನ ಬಳಗದವರು ವಚನ ಗಾಯನ ಮಾಡಿದರು. ಜಿ.ಎಂ. ಓಂಕಾರಣ್ಣವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಗೂಳಪ್ಪ ವಂದಿಸಿದರು.