ಬಸವಣ್ಣನವರ ತತ್ವ, ಆದರ್ಶ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತ: ಸಿ.ಜಿ.ಗೌರಿಶಂಕರ

| Published : May 01 2025, 12:46 AM IST

ಬಸವಣ್ಣನವರ ತತ್ವ, ಆದರ್ಶ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತ: ಸಿ.ಜಿ.ಗೌರಿಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿಯೇ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ ವಿಶ್ವಗುರು ಬಸವಣ್ಣನವರು ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನಜ್ಯೋತಿಯನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಸವಣ್ಣನವರು ಮೌಢ್ಯತೆ, ಅಸ್ಪೃಶ್ಯತೆ ಮತ್ತು ಜಾತೀಯತೆ ವಿರುದ್ಧ ಹೋರಾಡುವ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿ ಸಮ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾದರು.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷ ಸಿ.ಜಿ.ಗೌರಿಶಂಕರ ಬುಧವಾರ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ ಮತ್ತು ವೀರಶೈವ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಡೆದ 892ನೇ ಬಸವ ಜಯಂತಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿಯೇ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ ವಿಶ್ವಗುರು ಬಸವಣ್ಣನವರು ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನಜ್ಯೋತಿಯನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಬಸವಣ್ಣನವರು ಮೌಢ್ಯತೆ, ಅಸ್ಪೃಶ್ಯತೆ ಮತ್ತು ಜಾತೀಯತೆ ವಿರುದ್ಧ ಹೋರಾಡುವ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿ ಸಮ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾದರು ಎಂದರು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಬಸವಣ್ಣವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ವೀರಶೈವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಮಹಾದೇವಸ್ವಾಮಿ, ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್‌.ಪಿ.ಸ್ವಾಮಿ, ಕಾರ್ಯದರ್ಶಿ ರಾಜಮಣಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಎಂ.ವೀರಭದ್ರ ಸ್ವಾಮಿ, ದಲಿತ ಸಂಘಟನೆಗಳಾದ ಮುಖಂಡರಾದ ಶಿವಕುಮಾರ್, ಆನಂದ್, ಮಹಾದೇವ, ರಮಾನಂದ, ಶಶಿಕುಮಾರ್, ಅಹಿಂದ ಮುಖಂಡರಾದ ಇಂತಿಯಾಜುಲ್ಲ ಖಾನ್ , ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಬಸವ ಜಯಂತಿಗೆ ತಹಸೀಲ್ದಾರ್, ಅಧಿಕಾರಿಗಳು ಗೈರು: ಆಕ್ರೋಶ

ಮದ್ದೂರು:

ತಾಲೂಕು ಆಡಳಿತದಿಂದ ನಡೆದ ಬಸವ ಜಯಂತಿಗೆ ತಹಸೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಿ ವಿರುದ್ಧ ವೀರಶೈವ ಮತ್ತು ದಲಿತ ಸಂಘಟನೆ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.

ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಸ್ಮಿತಾರಾಮು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಿ ಬಗ್ಗೆ ಸಂಘಟನೆಗಳ ಮುಖಂಡರು ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇತ್ತೀಚಿನ ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವಗಳನ್ನು ಕಟಾಚಾರದಲ್ಲಿ ಆಚರಿಸಲಾಗುತ್ತಿದೆ. ಈ ಬಗ್ಗೆ ಸಂಘಟನೆಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಅಧಿಕಾರಿಗಳು ಜಯಂತಿಗಳ ಆಚರಣೆಗೆ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಲೋಪ ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.