ಸಾರಾಂಶ
ರಾಮನಗರ: ಶೋಷಣೆ ರಹಿತ, ಸಮಾನತೆ ಸಮಾಜದ ಸೃಷ್ಟಿಗಾಗಿ ಹೋರಾಡಿದ ಬಸವಣ್ಣನವರು ಸಮಾಜ ಸುಧಾರಕರು. ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ವಿಶ್ವ ಭಾತೃತ್ವದ ಸನ್ಮಾರ್ಗವನ್ನು ತೋರಿಸುತ್ತವೆ ಎಂದು ಎಂಎಚ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಪ್ರಾಂಶುಪಾಲ ಬಿ.ಎನ್.ಮಹೇಶ್ ಹೇಳಿದರು.
ನಗರದ ಕಾರಾಗೃಹದಲ್ಲಿ ಹಸನ್ಮುಖಿ ಸೇವಾ ಟ್ರಸ್ಟ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕಾರಾಗೃಹ ಸುಧಾರಣೆ ಸೇವೆ ಸಹಯೋಗದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿದ ಬಸವೇಶ್ವರರನ್ನು ನೆನಪಿಸಿಕೊಳ್ಳುವುದು ಅತ್ಯಂತ ಸಂತಸದ ವಿಚಾರವಾಗಿದೆ. ಆಚಾರ ವಿಚಾರ ಮೇಲು ಕೀಳು ಸ್ತ್ರೀ ಪುರುಷ ಲಿಂಗ ತಾರತಮ್ಯ, ಬಡವ ಶ್ರೀಮಂತ ಎಂಬ ಸಂಘರ್ಷಗಳು ಇದ್ದಂತ ಸಮಾಜಕ್ಕೆ ಬಸವಣ್ಣನವರು ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡಿದವರು ಎಂದರು.ಬಸವಣ್ಣನವರು ರಚಿಸಿದ ವಚನಗಳು ವಿಶ್ವಕ್ಕೆ ಮಾದರಿಯಾಗಿ ನೀತಿ ಸಾರಿದವು. ಜಗತ್ತಿನ ಮನುಕುಲಕ್ಕೆ ಜೀವನ ಮಾಡುವ ವಿಚಾರಗಳನ್ನು ತಿಳಿಸಿಕೊಟ್ಟವು. ಕಳಬೇಡ ಕೂಲಬೇಡ ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿ ನಾವು ತಿಳಿದುಕೊಳ್ಳುವ ಹಲವು ವಿಚಾರಗಳಿವೆ. ಇಂತಹ ಮಹನೀಯರು ಅನುಭವ ಮಂಟಪ ಸ್ಥಾಪಿಸಿ ಸಾಮಾಜಿಕ ಚಿಂತನೆಗಳ ವಿಚಾರಗಳನ್ನು ಅನುಭವದ ನೆಲೆಯಲ್ಲಿ ತಿಳಿ ಹೇಳಿದ ಸಂದರ್ಭ, ಸಮಾಜಕ್ಕೆ ಸ್ಮರಣೀಯವಾದ ಸಮಯ ಎಂದರು.
ವಚನಕಾರರ ದೃಷ್ಟಿಯಲ್ಲಿ ಜಾತಿಗೆ ಸ್ಥಾನ ಇಲ್ಲ. ಬಸವಣ್ಣನವರು ಕಂಡದ್ದು ಜಾತ್ಯತೀತ ಸಮಾನತೆಯ ಸಮಾಜ. ಆದ್ದರಿಂದ ಇವರ ಸಂದೇಶಗಳು ಇಡೀ ವಿಶ್ವಕ್ಕೆ ನೀಡಿದ ಸಂದೇಶಗಳಾಗಿವೆ. ಅದರಲ್ಲೂ ಸ್ತ್ರೀಯರು ಸೇರಿದಂತೆ ಎಲ್ಲ ವರ್ಗಗಳ ಸಮಾನತೆಗೆ ಸಂದೇಶ ಸಾರಿದವರು ಎಂದರು.ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ಶೋಷಿತ ಸಮಾಜಕ್ಕೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಹೋರಾಟಗಳು ಚರಿತ್ರಾರ್ಹವಾಗಿ ಕಂಡುಬಂದಿವೆ. ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ನಶಿಸುತ್ತಿವೆ. ಸಾಮಾಜಿಕ ಅವ್ಯವಸ್ಥೆ ಎಲ್ಲೂ ಕಂಡು ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಪ್ರಾಮಾಣಿಕವಾಗಿ ನಡೆದು ಕೊಳ್ಳಲು ಪ್ರಯತ್ನಿಸ ಬೇಕೆಂದರೆ ಬಸವಣ್ಣನವರ ವಚನಗಳು ನಮಗೆ ದಾರಿಯನ್ನು ತೋರುತ್ತವೆ. ಬಸವಣ್ಣನವರು ಸಮನ್ವಯದ ಹಾದಿಯ ಬಗ್ಗೆ ತಮ್ಮ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದರು.
ವಕೀಲ ಅಂಬರೀಶ್ ಮಾತನಾಡಿ, ಕಾರಾಗೃಹದಲ್ಲಿರುವ ಬಂಧಿಗಳಿಗೆ ಇಂತಹ ಕಾರ್ಯಕ್ರಮ ಒಳಿತು ಮಾಡುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ವಿಶ್ವಮಾನವತವಾದಿ ಬಸವಣ್ಣನವರ ಸಂದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಬಸವಣ್ಣರವರ ವಚನಗಳು ಧೈರ್ಯವನ್ನು ನೀಡುತ್ತವೆ. ಹೆದರಿಕೊಳ್ಳತಕ್ಕಂತಹ ಚಿಂತೆಯಲ್ಲಿ ತೊಡಗಿರತಕ್ಕಂತ ವ್ಯಕ್ತಿಗೆ ಇವು ಧೈರ್ಯವನ್ನು ತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ನನಗೆ ಯಾವ ಪದವಿಗಳು ಬೇಡ ಸದ್ಭಕ್ತರ ಬಳಿ ಇರುವುದೇ ಮಹಾಪದವಿ ಎಂದು ಹೇಳಿರುವ ಬಸವಣ್ಣನವರು ನಮಗೆ ಮಾರ್ಗದರ್ಶನವಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಹೇಮಾವತಿ ಅಂಬರೀಶ್, ಪ್ರಭು, ಮಲ್ಲೇಶ್ ಉಪಸ್ಥಿತರಿದ್ದರು. ಇದೇ ವೇಳೆರಾಕೇಶ್ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ರಮೇಶ ಸಿ.ಹೊಸದೊಡ್ಡಿ, ಚೆಲುವರಾಜ್ ಮತ್ತಿಕೆರೆ, ಕಾಕೋಳ್ ಶೈಲೇಶ್, ಮಲ್ಲೇಶ್ ಚೆನ್ನಮಾನಹಳ್ಳಿ, ಪೂರ್ಣಚಂದ್ರ ಶಿವಲಿಂಗಯ್ಯ, ಹೇಮಂತ್ ಗೌಡ ,ಪ್ರಭು ಅಂಜನಾಪುರ ಭಾಗವಹಿಸಿದ್ದರು.
10ಕೆಆರ್ ಎಂಎನ್ 8.ಜೆಪಿಜಿರಾಮನಗರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.