ಮುಂಡರಗಿ: ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದ ವಿಶ್ವಮಾನವ ಬಸವಣ್ಣನವರ ವಚನಗಳನ್ನು ಅರ್ಥೈಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ. ಆದರೆ ಅಣ್ಣನ ವಚನಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದಕರ ಎಂದು ಪುರಸಭೆ ಮಾಜಿ ಸದಸ್ಯ ಪ್ರಹ್ಲಾದ ಹೊಸಮನಿ ಬೇಸರ ವ್ಯಕ್ತಪಡಿಸಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣ ಕೇವಲ ಒಂದು ಜಾತಿ, ಒಂದು ಧರ್ಮಕ್ಕೆ ಸಂಬಂಧಪಟ್ಟವರಲ್ಲ. ಜಯಂತಿ ಕಾರ್ಯಕ್ರಮಕ್ಕೆ ಕೇವಲು 3 ಇಲಾಖೆ ಅಧಿಕಾರಿಗಳು ಹೊರತುಪಡಿಸಿದರೆ ಬೇರೆ ಇಲಾಖೆಯ ಅಧಿಕಾರಿಗಳು ಯಾರೂ ಬಂದಿಲ್ಲ. ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಬರದಿರುವುದು ಖೇದಕರ ಸಂಗತಿ. ತಹಸೀಲ್ದಾರ್ ಬರದಿರುವ ಇತರೆ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಮುಂದಿನ ವರ್ಷ ಹೀಗೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ಪೂಜಾರ, ಅಶ್ವಿನಿ ಗೌಡರ್ ಮಾತನಾಡಿ, ಬಸವಣ್ಣನವರು ಇತಿಹಾಸದ ಪುಟದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ವಚನ ಸಾಹಿತ್ಯದ ಮೂಲಕ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಬಸವಣ್ಣನವರು ಅಂತರ್‌ ಜಾತಿಯ ವಿವಾಹ ಮಾಡುವ ಮೂಲಕ ಜಾತೀಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಅಂತಹ ಶರಣರ ಜಯಂತಿಗಳನ್ನು ಕೇವಲ ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಒಮ್ಮತದಿಂದ ಸೇರಿ ಆಚರಿಸುವಂತಾಗಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಮುಖಂಡ ನಬಿಸಾಬ್ ಕೆಲೂರ್, ವಿ.ಎಸ್. ಗಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಎಲ್ಲರೂ ಜಾತ್ಯತೀತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ಭಾರತೀಯರು ಗೌರವದಿಂದ ಬದುಕಲು ಕಾರಣರಾದವರು ಬುದ್ದ, ಬಸವ, ಅಂಬೇಡ್ಕರ್. ಇವರೆಲ್ಲರೂ ಜಾತೀಯತೆಯನ್ನು ಹೊಡೆದೋಡಿಸಲು ಕಾರಣೀಕರ್ತರಾಗಿದ್ದಾರೆ. ಬಸವಣ್ಣನವರು ಹಲವಾರು ಬಿರುದುಗಳಿಂದ ಪ್ರಸಿದ್ಧಿ ಪಡೆದಿದ್ದಾರೆ. ಅವರು ನಮ್ಮ ಕರ್ನಾಟಕದಲ್ಲಿ ಜನಿಸಿರುವುದು ನಮಗೆಲ್ಲ‌ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಗೌರಿಶಂಕರ್ ಸಜ್ಜನರ್, ಸಬ್ ರಜಿಸ್ಟರ್ ಕಚೇರಿ ಸಿಬ್ಬಂದಿ, ನಿಂಗಪ್ಪ ಭಂಡಾರಿ, ಯಲ್ಲಪ್ಪ ಹೊಂಬಳಗಟ್ಟಿ, ಮಲ್ಲೇಶ ಹರಿಜನ, ಐ.ಎಸ್. ದೊಡ್ಡಮನಿ, ಶ್ರೀಕಾಂತ ತಿಮ್ಮಾಪೂರ, ರಾಮಣ್ಣ ಕೋಳಿ, ಧ್ರುವಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.