ವಿಶ್ವವೇ ಲಿಂಗಮಯವಾಗಲಿ ಎಂದ ಬಸವಣ್ಣ

| Published : Dec 16 2023, 02:00 AM IST

ಸಾರಾಂಶ

ಮುದ್ದೇಬಿಹಾಳದಲ್ಲಿ ನಡೆಯುತ್ತಿರುವ ಬಸವ ವಚನದಲ್ಲಿ ಶ್ರೀ ಕುಮಾರವಿರೂಪಾಕ್ಷ ಸ್ವಾಮೀಜಿ ಹತ್ತು ಹಲವಾರು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ, ಏನನ್ನು ನಾವು ಪೂಜಿಸಬೇಕು, ಯಾವ ಕಾಯಕ ಮಾಡಬೇಕು ಎಂದು ಅವರು ಮನವರಿಕೆ ಮಾಡಿಕೊಟ್ಟರು.

ಮುದ್ದೇಬಿಹಾಳ: ತಾಯಿ ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಗುರು ತಂದೆ ತಾಯಿಗಿಂತ ದೊಡ್ಡ ಸಂಪತ್ತು ಈ ಪ್ರಪಂಚದಲ್ಲಿ ಬೇರೊಂದಿಲ್ಲ ಮಾದರಾಸಾ ಮಾದಲಾಂಬಿಕೆ ಮುದ್ದಾದ ಕುಟುಂಬದಲ್ಲಿ ಬಸವಣ್ಣ ಉತ್ತಮ ಸಂಸ್ಕಾರದೊಂದಿಗೆ ಪ್ರೀತಿಯಿಂದ ನಲುಮೆಯಿಂದ ಆಟ ಆಡಿಕೊಂಡು ಬೆಳೆಯುತ್ತಲೇ ಆಚಾರ ನಿಷ್ಠೆ ಬಸವಣ್ಣನಿಗೆ ಧ್ಯಾನದಲ್ಲಿ, ಜಂಗಮ ಪ್ರೇಮ ತನ್ಮಯತೆ ಬಾಲ್ಯದಲ್ಲಿಯೇ ಇತ್ತು. ಅಂದಿನ ಶಿಕ್ಷಣ ಸಂಸ್ಕಾರಯುಕ್ತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ಇರುತ್ತಿತ್ತು. ಆದ್ಯಾತ್ಮಿಕ ಬುನಾದಿಯ ಮೇಲೆ ಶಿಕ್ಷಣ ನೀಡಲಾಗುತ್ತು. ಜೊತೆಗೆ ಶಿಕ್ಷಣದಲ್ಲಿ ಮಾತ್ರವಲ್ಲ ಆಟ-ಪಾಠಗಳಲ್ಲಿಯೂ ಸಂಸ್ಕಾರದ ನೀತಿ ತಿಳಿಹೇಳಲಾಗುತ್ತಿತ್ತು. ಅದೇ ಶಿಕ್ಷಣ ಇಂದಿನ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಬಾಲ್ಯದಲ್ಲಿಯೇ ಅದ್ಭುತ ಪ್ರತಿಭೆಯನ್ನು ಹೊಂದಿದ್ದ ಬಸವಣ್ಣ ಸಂದರ್ಭಕ್ಕೆ ತಕ್ಕಂತೆ ಸಣ್ಣ ವಚನಗಳನ್ನು ಬರೆಯಲಾರಂಭಿಸಿದನು. ಹೀಗೆ ಅಮಾವಾಸ್ಯೆ ದಿನದಂದು ತಂದೆ ಮಾದರಸ ಭೂಮಿಪೂಜೆ ಮಾಡುವ ಸಂದರ್ಭದಲ್ಲಿ ಇದೆಲ್ಲವನ್ನೂ ಏಕೆ ಮಾಡುತ್ತಿಯಾ ಎಂದು ಬಸವಣ್ಣ ತಂದೆಗೆ ಪ್ರಶ್ನಿಸುತ್ತಾನೆ. ಬಿತ್ತಿದ ಒಂದು ಬೀಜ ನೂರಾಗಿ ಕೋಟಿಯಾಗಿ ರಾಶಿರಾಶಿಯಾಗಿ ಬೆಳೆದು ನಿಲ್ಲುತ್ತದೆ. ಆಗ ಅದು ಆಹಾರ ಧಾನ್ಯವಾಗಿ ಇಡಿ ಜಗತ್ತಿಗೆ ಈ ಭೂತಾಯಿ ಅನ್ನ ಕೊಡುತ್ತಾಳೆ ಎಂದು ಹೇಳುತ್ತಿದ್ದಂತೆ ತಾನೂ ಕೂಡ ಒಂದೊಂದಾಗಿ ಮಣ್ಣಿನ ಲಿಂಗಗಳನ್ನು ತಯಾರಿಸಿ ಬಿತ್ತನೆ ಮಾಡಿದಂತೆ ಮಾಡುತ್ತಾನೆ. ಆಗ ತಂದೆ ಮಾದರಸ ಇದೇನು ಮಾಡುತ್ತಿಯಾ ಎಂದು ಕೇಳುತ್ತಾನೆ. ಆಗ ಬಸವಣ್ಣ ಹೀಗೆ ಲಿಂಗಗಳನ್ನು ಬಿತ್ತಿದರೆ ಒಂದರಿಂದ ಕೋಟಿ ಕೋಟಿ ಲಿಂಗಗಳಾಗಿ ಬೆಳೆಯಲಿ ಇಡಿ ವಿಶ್ವವೇ ಲಿಂಗಮಯವಾಗಬೇಕು ಎಂದು ಹೇಳುತ್ತಾನೆ. ಅದರಂತೆ ತಂದೆ ಮಾದರಸ ವಿವಿಧ ದೇವರನ್ನು ಪೂಜೆ ಮಾಡುತ್ತಿರುವುದನ್ನು ಗಮನಿಸಿದ ಬಸವಣ್ಣ ಇಷ್ಟು ದೇವರನ್ನು ಪೂಜೆ ಮಾಡುವ ಬದಲು ಏಕಾಂಗಿಯಾಗಿ ಒಂದೇ ದೇವರನ್ನು ಪೂಜೆ ಮಾಡಿದರೆ ದೇವರು ಮೆಚ್ಚಿ ವರ ನೀಡುತ್ತಾನೆ ಬೇರೆ ಬೇರೆ ದೇವರುಗಳನ್ನು ಪೂಜೆ ಮಾಡಿದರೆ ಭಕ್ತಿ ಹರಿದು ಹೋಗಿ ಯಾರೇ ಪೂಜೆ ಮಾಡಿದರೂ ಸಾರ್ಥಕವಾಗುವುದಿಲ್ಲ, ಫಲಿಸುವುದೂ ಇಲ್ಲ ಎಂದು ಜ್ಞಾನ ಮಾತುಗಳನ್ನು ಹೇಳುವುದನ್ನು ಕೇಳಿದ ತಂದೆ ಮಾದರಸ ಎಲ್ಲಲ್ಲದ ಸಂತಸ ಉಕ್ಕಿ ಹರಿಯುತ್ತದೆ. ಅದಕ್ಕಾಗಿಯೇ ಮುಂದೆ ಅಲ್ಪ ಆಯುಷ್ಯದಲ್ಲಿ ಜಗಜ್ಯೋತಿ, ವಿಶ್ವಗುರುವಾದ, ಭಕ್ತಿ ಬಂಢಾರಿಯಾಗಿ, ಅನುಭವ ಮಂಟಪ ಸ್ಥಾಪನೆ ಮಾಡಿ ಕಾಯಕ ದಾಸೋಹ ಸಮಾನತೆ ಮೂಲಕ ಶಾಶ್ವತ ಹೆಸರು ಉಳಿಯುವಂತಾಗಿದ್ದನು ಎಂದರು.