ನಾವು ಈ 21ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಆದರೆ ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸ್ತ್ರೀಗೆ ಸಮಾನತೆ ನೀಡಿದ್ದರು. ಬಸವಣ್ಣನವರು ಹುಟ್ಟಿ ಒಂಬತ್ತು ಶತಮಾನ ಕಳೆದರೂ ಇಂದಿಗೂ ಪುರುಷ ಪ್ರಧಾನ ಸಮಾಜ ಜಾಗೃತವಾಗಿದೆ. ಇಂದಿಗೂ ಸ್ತ್ರೀಯರಿಗೆ ನ್ಯಾಯ ದೊರೆತ್ತಿಲ್ಲ. ರಕ್ಷಕರಾದವರೇ ಸ್ತ್ರೀ ಭಕ್ಷಕರಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಸವಣ್ಣ ಅವರನ್ನು ವೇದಿಕೆ ಮೇಲೆ ಮೂರ್ತಿಯಾಗಿ ಕೂರಿಸುವ ಬದಲು ನಮ್ಮ ಒಳಗೆ ಸಾಕ್ಷಿಪ್ರಜ್ಞೆಯಾಗಿ ಕೂರಿಸಬೇಕು. ಆಗ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂದು ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್‌. ತ್ರಿಪುರಾಂತಕ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಜಾತಿ, ಧರ್ಮಗಳ ಬಗ್ಗೆ ಕಿತ್ತಾಡುತ್ತಿದ್ದ ಕಾಲದಲ್ಲಿ ಬಸವಣ್ಣನವರು ಮಾನವ ಧರ್ಮದ ಬಗ್ಗೆ ತಿಳಿಸಿಕೊಟ್ಟರು. ಬಸವಣ್ಣ ಅವರು ವೈಚಾರಿಕತೆ ಕುರಿತು ಜಾಗೃತಿ ಮೂಡಿಸಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದರು. ಬಸವಣ್ಣ ಅವರು ಎಂದೂ ನನಗಿಂತ ಕಿರಿಯರಿಲ್ಲ ಎನ್ನುತ್ತಿದ್ದರು. ಆದರೆ‌, ಈಗ ಎಲ್ಲರೂ ತನಗಿಂತ ಹಿರಿಯರಿಲ್ಲ ಎಂದು‌ ಬೀಗುತ್ತಿದ್ದಾರೆ ಎಂದರು.

ನಾವು ಈ 21ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಆದರೆ ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸ್ತ್ರೀಗೆ ಸಮಾನತೆ ನೀಡಿದ್ದರು. ಬಸವಣ್ಣನವರು ಹುಟ್ಟಿ ಒಂಬತ್ತು ಶತಮಾನ ಕಳೆದರೂ ಇಂದಿಗೂ ಪುರುಷ ಪ್ರಧಾನ ಸಮಾಜ ಜಾಗೃತವಾಗಿದೆ. ಇಂದಿಗೂ ಸ್ತ್ರೀಯರಿಗೆ ನ್ಯಾಯ ದೊರೆತ್ತಿಲ್ಲ. ರಕ್ಷಕರಾದವರೇ ಸ್ತ್ರೀ ಭಕ್ಷಕರಾಗುತ್ತಿದ್ದಾರೆ ಎಂದರು.

ಬಸವಣ್ಣ ಅವರು ನಮ್ಮ ಸಾಕ್ಷಿಪ್ರಜ್ಞೆಯಾಗಿ ಇರಬೇಕು ಹೊರೆತು ಸ್ಟ್ಯಾಂಪ್, ನಾಣ್ಯಗಳ ಮೇಲೆ, ಸಂಸ್ಥೆಗಳ ಹೆಸರಿನಲ್ಲಿ ಅಲ್ಲ. ನಾವು ತಪ್ಪು ಮಾಡಿದಾಗ ಒಳಗಿನಿಂದ ಬಸವಣ್ಣನ ತತ್ತ್ವಗಳು ನಮ್ಮನ್ನು ಎಚ್ಚರಿಸಬೇಕು. ಈ ಶತಮಾನದಲ್ಲೂ ನಮ್ಮ ನಾಲಿಗೆಯಲ್ಲಿ ಬಸವಣ್ಣ ಅವರ ಹೆಸರು ಬರುತ್ತಿದೆ ಎಂದರೆ ಅದಕ್ಕೆ ಬಸವಣ್ಣ ಅವರ ನಾಲಿಗೆಯೇ ಕಾರಣ. ಏಕೆಂದರೆ ನುಡಿದಂತೆ ನಡೆದ ಮಹಾತ್ಮ ಎಂದು ಬಣ್ಣಿಸಿದರು.

ನಾವು ಪ್ರತಿ ವರ್ಷ ಬಸವಣ್ಣ ಅವರ ಜಯಂತಿ ಆಚರಿಸುತ್ತೇವೆ. ಮೂರ್ತಿ, ಫೋಟೋ ಪೂಜೆ ಮಾಡುತ್ತೇವೆ. ಅವರ ಆದರ್ಶ, ಸಿದ್ಧಾಂತ ಕೊಂಡಾಡುತ್ತೇವೆ. ಆದರೆ, ನಮ್ಮಲ್ಲಿ ಎಲ್ಲವೂ ಕೇವಲ ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆಯೇ ಹೊರೆತು ಅವರನ್ನು ಅನುಸರಿಸುತ್ತಿಲ್ಲ. ಮೂರ್ತಿ ಪೂಜೆ ವಿರೋಧಿಸಿದ ಮಹಾತ್ಮನ ಮೂರ್ತಿ ಪೂಜೆ ಮಾಡುತ್ತಿದ್ದೇವೆ ಎಂದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಉದ್ಘಾಟಿಸಿದರು, ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್ ಕುಮಾರ್, ಡಾ. ಆನಂದಕುಮಾರ್, ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎನ್‌.ಆರ್‌. ಚಂದ್ರೇಗೌಡ, ಹಣಕಾಸು ಅಧಿಕಾರಿ ಪ್ರೊ.ಎಸ್‌. ನಿರಂಜನ್‌ ರಾಜ್‌ ಮೊದಲಾದವರು ಇದ್ದರು.