12ನೇ ಶತಮಾನದಲ್ಲಿ ಬಸವಾದಿ ಶರಣರು ಈ ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಶ್ರೀಸಾಮಾನ್ಯನಿಗೂ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ಹಾದಿಯ ನಿಚ್ಚಳವಾಗಿಸಿದರು ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

12ನೇ ಶತಮಾನದಲ್ಲಿ ಬಸವಾದಿ ಶರಣರು ಈ ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಶ್ರೀಸಾಮಾನ್ಯನಿಗೂ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ಹಾದಿಯ ನಿಚ್ಚಳವಾಗಿಸಿದರು ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದಲ್ಲಿ ಸೋಮವಾರ ವೀರಶೈವ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಬಸವಣ್ಣನವರ ಕಾಲದ ಸಾಮಾಜಿಕ ಬದಲಾವಣೆ ಈ ಜಗತ್ತಿನ ಇತಿಹಾಸದಲ್ಲಿ ದಾಖಲಾಗುವಂತಹದ್ದು. ಶೋಷಿತ ಸಮುದಾಯಗಳಿಗೆ ದನಿಯಾಗುವ ಕೆಲಸವ ಹಾಗೂ ಅವರಿಗೊಂದು ಸಾಮಾಜಿಕ ಸ್ಥಾನ ಮಾನ ಕಲ್ಪಿಸುವ ನಿಟ್ಟಿನಲ್ಲಿ ಅಂದೇ ಬಸವಣ್ಣ ಮುಂದಡಿ ಇಟ್ಟಿದ್ದರು ಎಂದರು.

ಸ್ವಾತಂತ್ರ್ಯಾನಂತರ ನಾವು ಕಾಣುತ್ತಿರುವ ಸಂಸತ್ ವ್ಯವಸ್ಥೆಯ 12 ನೇ ಶತಮಾನದಲ್ಲಿ ಅನುಭವ ಮಂಟಪ ಆರಂಭಿಸುವ ಮೂಲಕ ಭವಿಷ್ಯದ ಪ್ರಜಾಸತ್ತಾತ್ಮಕ ನೆಲೆಗಳಿಗೆ ಬಸವಣ್ಣ ಅಂದೇ ಪೀಠಿಕೆ ಒದಗಿಸಿದ್ದರು. ಆಲಕ್ಷಿತ ಜನಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಮಾಜಿಕ ಸ್ಥಾನಮಾನ ಸಿಗುವಂತೆ ಮಾಡಿದವರು ಬಸವಾದಿ ಶರಣರು. ಇಂತಹ ಶರಣರ ಆಶಯಗಳನ್ನು ಈಡೇರಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದರು.

ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಡವರ, ನಿರ್ಲಕ್ಷಿತರ ಪರವಾಗಿ ಹೋರಾಡುತ್ತಾ ಬಂದಿದೆ. ಈಗಲೂ ಕೂಡ ಕಾಂಗ್ರೆಸ್ ಸರ್ಕಾರ ಬಸವಣ್ಣರ ಕಾರ್ಯಗಳನ್ನು ನಿಜ ಅರ್ಥದಲ್ಲಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಅನುದಾನದಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಚಳ್ಳಕೆರೆ ನಗರದಲ್ಲಿ ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬಸವಣ್ಣನ ಆಶಯಗಳ ಕೇವಲ ಮಾತಿನಲ್ಲಿ ಉಳಿಸಿಕೊಳ್ಳದೆ ನಿಜದನಿಯಲ್ಲಿ ಆಚರಿಸುವ ಪ್ರಯತ್ನಗಳು ಸಾರ್ವತ್ರಿಕಗೊಳ್ಳಬೇಕು ಎಂದರು.

ನಗರಸಭೆ ಪೌರಾಯುಕ್ತರಾದ ನಾಗವೇಣಿ, ಜಿಲ್ಲಾ ಪಂಚಾಯತಿ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಹಿರಿಯ ಕಾಂಗ್ರೆಸ್ ಮುಖಂಡ ಟಿ ಪ್ರಭುದೇವ್, ಗ್ರಾಮಾಂತರ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಮತ್ತು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಟಿ.ಆರ್.ಕಿರಣ್ ಶಂಕರ್, ಮುಖಂಡರಾದ ಶಿವಕುಮಾರ್, ಶಿವಸ್ವಾಮಿ, ತಿಪ್ಪೇಸ್ವಾಮಿ, ಹೊಸಮನೆ ಸ್ವಾಮಿ, ನಟರಾಜ್, ಜಗದೀಶ್, ಮಂಜುಳಮ್ಮ, ನಿರ್ಮಲಾ, ಪ್ರಕಾಶ್, ಸತೀಶ್, ವಂದನಾ ರಾಜಣ್ಣ, ರಾಜಣ್ಣ, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.