ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಮತ್ತು ತಾಲೂಕಿನ ಆಯಾಕಟ್ಟಿನ ಸ್ಥಳಗಳಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆ ಹಾಗೂ ಬಸವ ಭವನ ನಿರ್ಮಾಣಕ್ಕಾಗಿ ತಮ್ಮನ್ನು ಬೆಂಬಲಿಸುವಂತೆ ತಾಲೂಕು ಮಹಾಸಭಾದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಾಳೇಗೌಡನಕೊಪ್ಪಲು ಶಿವಕುಮಾರ್ ಮನವಿ ಮಾಡಿದರು.ತಾಲೂಕಿನ ಬೇಬಿ ಗ್ರಾಮದಲ್ಲಿ ಮಂಗಳವಾರ ತಾಳಶಾಸನ ಆನಂದ್ ತಂಡದ ಸದಸ್ಯರ ಪರವಾಗಿ ಮತಯಾಚನೆ ನಡೆಸಿದ ಬಳಿಕ ಮಾತನಾಡಿದ ಅವರು, ವೀರಶೈವ ಸಮಾಜ ಮೇಲ್ನೋಟಕ್ಕೆ ಮುಂದುವರೆದಂತೆ ಕಂಡರೂ ಈಗಲೂ ಕೂಡ ತುಂಬಾ ಹಿಂದುಳಿದಿದೆ. ಸಮಾಜದ ಜನರು ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಯಾಗಬೇಕಿದೆ ಎಂದರು.
ನಮ್ಮನ್ನು ಸಮಾಜ ಬೆಂಬಲಿಸಿದರೆ ಅಗತ್ಯವಿರುವ ಎಲ್ಲಾ ಸೌಕರ್ಯಗಳಿಗಾಗಿ ನಿರಂತರ ಹೋರಾಟ ಮಾಡಲಾಗುವುದು. ಸಮಾಜದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯದ ಅವಶ್ಯಕತೆ ಇದ್ದು, ಸಮುದಾಯದ ಅಭಿವೃದ್ಧಿಗಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತಾಳಶಾಸನ ಆನಂದ್ ಹಾಗೂ ತಾಲೂಕಿನಲ್ಲಿ ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.ಈಗಾಗಲೇ ಬೇಬಿ, ತಾಳಶಾಸನ, ಚಾಗಶೆಟ್ಟಹಳ್ಳಿ, ಹಾಗನಹಳ್ಳಿ, ಅಮೃತಿ, ಡಿಂಕಾ, ಬಳೇಅತ್ತಿಗುಪ್ಪೆ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದೇವೆ. ಮತದಾರರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.
ಸಮಾಜದಿಂದ ದೂರ ಉಳಿದಿದ್ದ ಕೆಲವು ವ್ಯಕ್ತಿಗಳು ಈಗ ಬಂದು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಹಂಚಿಕೆ ಮಾಡುತ್ತಾರೆ ಎಂಬುದಾಗಿ ಸುಳ್ಳು ಸಂದೇಶಗಳನ್ನು ಮತದಾರರಲ್ಲಿ ಬಿತ್ತುತ್ತಿದ್ದಾರೆ. ಸಮಾಜದ ಬಾಂಧವರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಕೋರಿದರು.ಈ ವೇಳೆ ತಾಳಶಾಸನ ರಾಜಣ್ಣ, ಡಿಂಕಾ ಕಲಿಗಣೇಶ್, ಪದ್ಮರಾಜು, ಬಿ.ಪಿ.ಉಮೇಶ್, ಎಚ್.ಎನ್.ಕುಮಾರ್, ಎ. ಜಯಕುಮಾರ, ಎಸ್.ಎಂ.ದಯಾನಂದ, ಬಿ.ಇ.ರುದ್ರೇಶ್, ಪ್ರಾಣೇಶ್, ಸಿ.ಬಿ.ಬಸಪ್ಪ, ರುದ್ರಸ್ವಾಮಿ, ಜ್ಯೋತಿ, ಮೀನಾಕ್ಷಿ, ಬಿ.ರಾಜೇಶ್ವರಿ, ಶಶಿಕಲಾ, ಶೈಲ, ಸವಿತಾ, ಶಿವಪ್ಪಾಜಿ, ದರ್ಶನ್, ಚಂದ್ರ, ಇತರರು ಇದ್ದರು.ವೀರಶೈವ ಮಹಾಸಭಾ ಚುನಾವಣೆ ಎಸ್.ಆನಂದ್ ಗುಂಪಿಗೆ ಬೆಂಬಲ - ಬಿದರಹಳ್ಳಿ ನಾಗರಾಜ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್.ಆನಂದ್ ಹಾಗೂ ಅವರ ಗುಂಪಿಗೆ ನಮ್ಮ ಬೆಂಬಲ ನೀಡುವುದಾಗಿ ತಾಲೂಕು ಘಟಕದ ಅಧ್ಯಕ್ಷ ಬಿದರಹಳ್ಳಿ ನಾಗರಾಜು ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನ ವೀರಶೈವ ಜನಾಂಗದವರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದರು.ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯಲ್ಲಿ ಹೊಂದಾಣಿಕೆ ಬಾರದ ಕಾರಣ ಚುನಾವಣೆ ಏರ್ಪಟ್ಟಿದೆ. ಇದೇ ತಿಂಗಳ 21 ರಂದು ಮಂಡ್ಯದ ವಿದ್ಯಾರ್ಥಿ ನಿಲಯ ವೀರಶೈವ ಭವನದಲ್ಲಿ ಚುನಾವಣೆ ನಡೆಯಲಿದೆ. ವೀರಶೈವ ಬಳಗದ ಮತದಾರರು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಎಸ್.ಆನಂದ್ ಹಾಗೂ ಅವರ ಗುಂಪಿಗೆ ಮತ ನೀಡುವಂತೆ ಮನವಿ ಮಾಡಿದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್ ಮಾತನಾಡಿ, ಜಿಲ್ಲಾ ವೀರಶೈವ ಮಹಾಸಭಾ ಚುನಾಣೆಯಲ್ಲಿ ಈಗಾಗಲೇ ಎರಡು ಬಣಗಳು ಚುನಾವಣೆಗೆ ಸ್ಪರ್ಧಿಸಿವೆ. ಅಧ್ಯಕ್ಷ ಸ್ಥಾನಕ್ಕೆ ಎಸ್.ಆನಂದ್ ಹಾಗೂ ಅವರ ಗುಂಪಿನಿಂದ 30 ಮಂದಿ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ತಾಲೂಕಿನಿಂದ ಮಹದೇವಸ್ವಾಮಿ ಅವರನ್ನು ಎಸ್.ಆನಂದ್ ಗುಂಪಿನಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಸಲಾಗಿದೆ. ಎಲ್ಲಾ ವೀರಶೈವ ಮತದಾರರು ಬೆಂಬಲ ನೀಡಬೇಕು ಎಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕ ಎಸ್.ಕುಮಾರ್, ಅಭ್ಯರ್ಥಿ ಮಹದೇವಸ್ವಾಮಿ ಹಾಜರಿದ್ದರು.