ಬಸವಣ್ಣ ಸಾಂಸ್ಕೃತಿಕ ನಾಯಕ: ಸಂಭ್ರಮಾಚರಣೆ

| Published : Jan 20 2024, 02:02 AM IST

ಸಾರಾಂಶ

900 ವರ್ಷಗಳ ನಂತರವೂ ಬಸವಣ್ಣನವರ ಚಿಂತನೆಗಳ ಜೀವಂತವಾಗಿವೆ ಎನ್ನುವುದಕ್ಕೆ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದೇ ಸಾಕ್ಷಿ.

ಹೊಸಪೇಟೆ: ಸರ್ಕಾರ ಬಸವಣ್ಣರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬೆನ್ನಲ್ಲೆ ಸಮಾಜದ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಅಶ್ವರೂಢ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಕನ್ನಡ ವಿವಿಯ ಡಾ. ಕೆ. ರವೀಂದ್ರನಾಥ ಮಾತನಾಡಿ, ಸಾಮಾಜಿಕ ನ್ಯಾಯದ ಮೊದಲ ಹರಿಕಾರ, ವಿಶ್ವಗುರು ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯನವರು ಘೋಷಿಸಿರುವುದು ಬಸವ ಭಕ್ತರಿಗೆ, ಅನುಯಾಯಿಗಳಿಗೆ ಸಂತಸ ತಂದಿದೆ. ಸಮ ಸಮಾಜ ನಿರ್ಮಾಣ, ಮಹಿಳೆಯರಿಗೂ ಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದ ಮಹಾಶರಣ ಬಸವಣ್ಣ. ಅವರ ವಚನಗಳು ಇಂದು, ಎಂದೆಂದಿಗೂ ಸರ್ವರಿಗೂ ಅರಿವು ಹೆಚ್ಚಿಸುವ ಜ್ಞಾನ ಭಂಡಾರವಾಗಿವೆ ಎಂದರು.

ಸಮಾಜದ ಹಿರಿಯ ಮುಖಂಡ ಸಾಲಿಸಿದ್ದಯ್ಯಸ್ವಾಮಿ ಮಾತನಾಡಿ, 900 ವರ್ಷಗಳ ನಂತರವೂ ಬಸವಣ್ಣನವರ ಚಿಂತನೆಗಳ ಜೀವಂತವಾಗಿವೆ ಎನ್ನುವುದಕ್ಕೆ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದೇ ಸಾಕ್ಷಿ ಎಂದರು.

ಮಖಂಡರಾದ ಡಾ. ಮಹಾಬಲೇಶ್ವರ ರೆಡ್ಡಿ, ಉಪನ್ಯಾಸಕ ಬಸವರಾಜ, ಬಸವಕಿರಣ, ಕಾಶಿನಾಥಯ್ಯ, ಚಂದ್ರಶೇಖರ, ಮಧುರಚನ್ನಶಾಸ್ತ್ರಿ ಇತರರು ಮಾತನಾಡಿದರು. ಬಿ.ಜಿ. ಈಶ್ವರಪ್ಪ, ರೇವಣಸಿದ್ದಪ್ಪ, ಮಾವಿನಹಳ್ಳಿ ಬಸವರಾಜ, ಅಂಬನಗೌಡ, ಮಲ್ಲೇಶಪ್ಪ, ಕಾಶಿನಾಥ, ಸೋದಾ ವಿರೂಪಾಕ್ಷ ಗೌಡ, ಜಂಗಮಣಿ, ಮುಖಂಡರಾದ ಸಣ್ಣಮಾರೆಪ್ಪ, ಶಿವಕುಮಾರ ಮತ್ತಿತರರಿದ್ದರು.