ಸಾರಾಂಶ
ಅನುಭವ ಮಂಟಪದ ಮೂಲಕ ಎಲ್ಲಾ ಸಮಾಜವನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಬೇಕೆಂಬ ಮಹದಾಸೆ ಹೊಂದಿದ್ದ ಬಸವಣ್ಣನವರು, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ನುಡಿದಂತೆ ನಡೆಯುವ ಜೊತೆಗೆ ಯಾವ ಪದವಿಗೂ ಆಸೆ ಪಡದೆ ಜನರಲ್ಲಿ ಭಕ್ತಿಯ ಬೀಜ ಬಿತ್ತಿದ ಬಸವಣ್ಣ ಅವರು ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ನೀಡಿದ ಮಹಾನ್ ಶರಣರು ಎಂದು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಜೆ.ಎಸ್.ರಾಜಶೇಖರ್ ಹೇಳಿದರು.ಪಟ್ಟಣದ ಜೋಡಿ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಜಗಜ್ಯೋತಿ ಬಸವ ಜಯಂತ್ಯುತ್ಸವದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತಿದರು. ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜ ಸುಧಾರಣೆಗಾಗಿ ಪಣತೊಟ್ಟಿದ್ದರು ಎಂದರು.
ಅನುಭವ ಮಂಟಪದ ಮೂಲಕ ಎಲ್ಲಾ ಸಮಾಜವನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಬೇಕೆಂಬ ಮಹದಾಸೆ ಹೊಂದಿದ್ದ ಬಸವಣ್ಣನವರು, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದರು ಎಂದರು.ಬಸವ ಜಯಂತಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ನೆರವೇರಿಸಿ ಭಕ್ತಿನಮನ ಸಲ್ಲಿಸಲಾಯಿತು. ನಂತರ ವಿಶ್ವಗುರು ಬಸವಣ್ಣ ಹಾಗೂ ಚಂದ್ರಮೌಳೇಶ್ವರ ಭಾವಚಿತ್ರಗಳನ್ನು ಸರ್ವಾಲಂಕೃತ ವಾಹನದಲ್ಲಿರಿಸಿ ವೀರಗಾಸೆ ಕುಣಿತದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ನಟೇಶ್‌ಬಾಬು, ಕಾರ್ಯದರ್ಶಿ ರವಿ, ಖಜಾಂಚಿ ರಾಜಶೇಖರ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಗೀತಾ ಗುರುಪ್ರಸಾದ್, ಸಮಾಜದ ಮುಖಂಡರಾದ ಎನ್.ನಟರಾಜ್, ಸಿದ್ದಲಿಂಗಪ್ಪ, ಅಲ್ಲಮಪ್ರಭು, ಮಹೇಂದ್ರ, ಶಿಕ್ಷಕ ನಾಗೇಶ್ ಸೇರಿದಂತೆ ಹಲವರು ಇದ್ದರು.