ಸಮಾನತೆ ಸಾರಿದ ಮಹಾಪುರುಷ ಬಸವಣ್ಣ

| Published : May 11 2024, 12:30 AM IST

ಸಾರಾಂಶ

ಕನಕಪುರ: ನಗರದ ವೀರಶೈವ ತರುಣರ ಸಂಘದ ಪದಾಧಿಕಾರಿಗಳು ಬಸವೇಶ್ವರ ಜಯಂತ್ಯುತ್ಸವವನ್ನು ಆಚರಿಸಿದರು.

ಕನಕಪುರ: ನಗರದ ವೀರಶೈವ ತರುಣರ ಸಂಘದ ಪದಾಧಿಕಾರಿಗಳು ಬಸವೇಶ್ವರ ಜಯಂತ್ಯುತ್ಸವವನ್ನು ಆಚರಿಸಿದರು.

ಕೋಟೆ ಬಸವ ಮಂದಿರದಲ್ಲಿ ಶ್ರೀಕ್ಷೇತ್ರ ದೇಗಲು ಮಠದ ಕಿರಿಯ ಶ್ರೀಗಳಾದ ಚನ್ನಬಸವ ಮಹಾಸ್ವಾಮಿಗಳ ಪಾದ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮ ವೀರಗಾಸೆ, ನಂದಿ ದ್ವಜ ಇನ್ನಿತರ ಕಲಾತಂಡಗಳೊಂದಿಗೆ ಕೋಟೆ ಬಸವ ಮಂದಿರದಿಂದ ಎಂ.ಜಿ.ರಸ್ತೆ ಮುಖಾಂತರ ನಗರದ ಬಸವೇಶ್ವರ ದೇವಸ್ಥಾನಕ್ಕೆ ತಲುಪಿತು.

ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶಿರ್ವಚನ ನೀಡಿದ ಶ್ರೀ ಚನ್ನಬಸವ ಸ್ವಾಮೀಜಿ, ಬಸವಣ್ಣನವರು ಸಾಮಾಜಿಕ ಸಮಾನತೆ ಸಾರುವ ಮಾನವ ಧರ್ಮವನ್ನು ಪ್ರತಿಪಾದಿಸಿದವರು. ಸಮಾಜದ ಅತ್ಯಂತ ಕೆಳವರ್ಗದವರು ಕೂಡ ತಮ್ಮ ಇಷ್ಟ ದೇವರನ್ನು ಪೂಜಿಸಲು ಅರ್ಹರು ಎಂಬುದನ್ನು ಸಾರಿದ ಮಹಾನ್ ಪುರುಷರು ಎಂದರು.

ಅಂದಿನ ಕಾಲದಲ್ಲೇ ಅನುಭವ ಮಂಟಪವನ್ನು ಸ್ಥಾಪಿಸಿ ಮೊಟ್ಟ ಮೊದಲ ಪ್ರಜೆಗಳ ಸಭೆಯನ್ನು ನಡೆಸಿ ಸಮಾಜದ ಪ್ರತಿಯೊಬ್ಬರು ತಮ್ಮ ಅನುಭವ ಅನಿಸಿಕೆಗಳನ್ನು ವ್ಯಕ್ತಪಡಿಸುವ ವೇದಿಕೆ ನಿರ್ಮಿಸಿದ್ದಲ್ಲದೆ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಕಾಣುವಂತಹ ವಾತಾವರಣ ಸೃಷ್ಟಿಸಿದ ಜಗತ್ತಿನ ಏಕೈಕ ವ್ಯಕ್ತಿ ಎಂದರೆ ತಪ್ಪಾಗಲಾರದು ಎಂದರು.

ಬಸವೇಶ್ವರ ದೇವಾಲಯದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ವೇಳೆ ವೀರಶೈವ ತರುಣರ ಸಂಘದ ಅಧ್ಯಕ್ಷ ಕೆ.ಆರ್.ಸುರೇಶ್, ಕಾರ್ಯದರ್ಶಿ ದೇವರಾಜ್, ಖಜಾಂಚಿ ವೀರೇಶ್, ಆಟೋ ರೇಣುಕಾ, ಲಾಯರ್ ಮಹೇಶ್, ಶೈಲಾಶಂಕರ್, ಮಾದೇವ ಪ್ರಸಾದ್ ಸೇರಿದಂತೆ ವೀರಶೈವ ಮುಖಂಡರು ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ವೀರಶೈವ ತರುಣ ತಂಡದ ಪದಾಧಿಕಾರಿಗಳು ಬಸವ ಜಯಂತಿ ಆಚರಿಸಿದರು.