ಬಸವಣ್ಣ ವಿಶ್ವವನ್ನೆ ಬೆಳಗಿದ ತತ್ವಕಾರ: ವಿರೂಪಾಕ್ಷ ಸ್ವಾಮೀಜಿ

| Published : Feb 26 2024, 01:34 AM IST

ಸಾರಾಂಶ

ಬಸವಕಲ್ಯಾಣದಲ್ಲಿ 20 ದಿನಗಳ ಬಸವ ಪುರಾಣ ಪ್ರವಚನದ ಉದ್ಘಾಟನೆ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಮೂಢನಂಬಿಕೆ, ಕಂದಾಚಾರ, ಮೇಲು-ಕೀಳು, ಅನೀತಿಗಳಿದ್ದ ಸಮಯದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಜನ್ಮ ತಾಳಿ ವಿಶ್ವವನ್ನೆ ಬೆಳಗುವ ತತ್ವಗಳನ್ನು ನೀಡಿದರು ಎಂದು ಕುಮಾರ ವಿರೂಪಾಕ್ಷ ಸ್ವಾಮೀಜಿ ನುಡಿದರು.

ನಗರದ ಥೇರ್ ಮೈದಾನದಲ್ಲಿನ ಸಭಾಭವನದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿರುವ 20 ದಿನಗಳ ಬಸವ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಸವಣ್ಣನವರ ತಂದೆ ತಾಯಿಗಳಾದ ಮಾದರಸ, ಮಾದಲಾಂಬಿಕೆಗೆ ಬಹಳ ದಿನದ ನಂತರ ಹುಟ್ಟಿದ ಮಗು ಬಸವಣ್ಣ, ಅಂದು ಬಾಗೇವಾಡಿ ಮಾಂಡಲಿಕರಾದ ಮಾದರಸರು, ದಲಿತ ಶಿವನಾಗಮಯ್ಯಾ ಮಂತ್ರೋಪದೇಶ ಕೇಳಿದಕ್ಕಾಗಿ ಕಿವಿಯಲ್ಲಿ ಕಾಯ್ದ ಸಿಸ ಹಾಕುವ ಶಿಕ್ಷೆ ನೀಡಲು ತಿರ್ಮಾನಿಸಿದ ಸಭೆಯಲ್ಲಿ ಕುಳಿತಾಗ ಬಸವಣ್ಣನ ಜನನ ಸುದ್ದಿ ಬಂದ ಹಿನ್ನೆಲೆ ಮಾದರಸರು ದಲಿತರಿಗೆ ನೀಡುವ ಶಿಕ್ಷೆ ಕೈಬಿಟ್ಟರು ಎಂದು ಶ್ರೀಗಳು ತಿಳಿಸದರು.

ಭಾಲ್ಕಿ ಗುರುಬಸವಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿ ಸ್ಥಾನದಲ್ಲಿದ್ದು ಸಾಮಾಜಿಕ ನ್ಯಾಯ ನೀಡಿ ಅಧಿಕಾರ ಸದುಪಯೋಗಪಡಿಸಿಕೊಂಡರು ಬಸವಣ್ಣನವರು ರಾಜನ ಮಗ ರಾಜ ಆಗಲಿ ಎನ್ನದೆ ಪ್ರಜೆ ರಾಜನಾಗಲಿ ಎಂದರು.

20 ದಿನಗಳವರೆಗೆ ಶ್ರಿಗಳು ಬಸವಣ್ಣನವರ ಜೀವನ ಚರಿತ್ರೆ ಪ್ರಸ್ತುತ ಪಡಿಸುತ್ತಾರೆ. ಇದರ ಸದುಪಯೋಗವನ್ನು ನಗರದ ಬಸವ ಅಭಿಮಾನಿಗಳು ಪಡೆದುಕೊಳ್ಳಬೇಕೆಂದರು.

ಹುಲಸೂರ ಶಿವಾನಂದ ಸ್ವಾಮೀ ಮಾತನಾಡಿ, ಬಸವಪುರಾಣವನ್ನು ಭೀಮಕವಿ ಬರೆದಿದ್ದಾರೆ. ಅದನ್ನು ವಿಸ್ತಾರವಾಗಿ ಇಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ವೈಚಾರಿಕ ಚಿಂತನೆ ಬೇರೆ, ಬಸವಪುರಾಣ ಬೇರೆ. ಅದನ್ನು ಅರ್ಥವತ್ತಾಗಿ ಹೇಳುವ ಕಲೆ ಕರ್ನಾಟಕದಲ್ಲಿ ಕುಮಾರ ವಿರೂಪಾಕ್ಷ ಸ್ವಾಮೀಜಿಯವರಿಗೆ ಮಾತ್ರ ಸಿದ್ಧಿಸಿದೆ ಎಂದರು.

ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು. ಬಸವೇಶ್ವರ ದೇವಸ್ಥಾನ ಸಮಿತಿ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿವೇಕಾನಂದ ಹೊದಲೂರೆ, ಬಸವರಾಜ ಖಂಡಾಳೆ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ನಗರ ಯೋಜನಾ ಮಾಜಿ ಅಧ್ಯಕ್ಷ ರಾಜಣ್ಣ ಸಿರಗಾಪೂರ, ಡಾ.ವಿ.ಎಸ್ ಮಠಪತಿ, ಡಾ.ಜಿ.ಎಸ್ ಭುರಾಳೆ, ವಿಶ್ವಸ್ಥ ಸಮೀತಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ ಮುಂತಾದವರಿದ್ದರು.