ಕನ್ನಡಪ್ರಭ ವಾರ್ತೆ ಹಿರಿಯೂರು

ವಿಶ್ವಕಂಡ ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶ ನೀಡಿದ್ದರು. ಸ್ತ್ರೀಯರಿಗೆ ಸಮಾನತೆ ನೀಡಿದ ಕೀರ್ತಿ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷೆ ಎನ್.ಯಶೋದಮ್ಮ ಹೇಳಿದರು.

ನಗರದ ನಿವೃತ್ತ ನೌಕರರ ಸಭಾ ಭವನದಲ್ಲಿ ಶ್ರೀ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾಸಂಘ ಕೆ.ಎಂ.ಕೊಟ್ಟಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿಯ ಅಂಗವಾಗಿ ಬಸವಾದಿ ಶರಣರು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಹಾಗೂ ವರ್ಗದ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದ ಸಮಾಜವನ್ನು ಜಾತಿ ರಹಿತ ಹಾಗೂ ವರ್ಗ ರಹಿತ ಸಮಾಜವನ್ನಾಗಿ ನಿರ್ಮಾಣ ಮಾಡುವುದೇ ಅವರ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ಅವರ ಹೋರಾಟ ಕ್ರಾಂತಿಕಾರಕವಾಗಿತ್ತು ಎಂದರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಈ ನಾಡಿನಲ್ಲಿ ಸಮಾನತೆಗಾಗಿ ಸಮಾಜವನ್ನು ಒಗ್ಗೂಡಿಸಲು ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟವರು. ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ತತ್ವವನ್ನು ಸಾರಿ ಆಗಿನ ಕಾಲದಲ್ಲಿಯೇ ಬ್ರಾಹ್ಮಣ ಸಮುದಾಯದ ಮಧುವರಸನ ಮಗಳಿಗೂ ಶಿವಶರಣ ಹರಳಯ್ಯನವರ ಮಗ ಶೀಲವಂತನಿಗೂ ಮದುವೆ ಮಾಡಿಸಿ ಅಂತರ್ಜಾತಿಯ ವಿವಾಹಕ್ಕೆ ಅಡಿಗಲ್ಲು ಹಾಕಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು.


ಈ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಿದವರು. ಕಾಯಕದಲ್ಲಿ ಮೇಲು ಕೀಳು ಎಂಬ ಭಾವ ಸಲ್ಲದು ಶರಣರು ಮಾಡುವ ಕಾಯಕವು ಶುದ್ಧ ಹಾಗೂ ಸಮಾಜಮುಖಿಯಾಗಿರಬೇಕು ಎಂದು ಸಾರಿದರು. ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದರು. ಇವರು ಬರೆದಿರುವ ವಚನಗಳಲ್ಲಿ ಲಿಂಗ ಭೇದ, ಜಾತಿಭೇದ, ವರ್ಣಭೇದ ಇಲ್ಲದೆ ಸರ್ವರಿಗೂ ಒಳಿತು ಬಯಸುವ ಅಂಶವನ್ನು ಕಾಣಬಹುದಾಗಿದೆ. ಆದಕಾರಣ ಇವರ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ನಿವೃತ್ತ ಶಾಲಾ ತನಿಖಾಧಿಕಾರಿ ಟಿ.ಶಿವಪ್ರಸಾದ್ ಮಾತನಾಡಿ, ಸಮಾಜಕ್ಕೆ ಸರಳವಾದ ಭಕ್ತಿ ಮಾರ್ಗ ತೋರಿಸಿ ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮೂರ್ತಿ ಪೂಜೆಯ ಬದಲು ಇಷ್ಟಲಿಂಗ ಪೂಜೆ ಮಾರ್ಗ ತೋರಿಸಿದ ಬಸವಣ್ಣ ಭಕ್ತಿ ಭಂಡಾರಿ ಬಸವಣ್ಣ ಎನಿಸಿಕೊಂಡರು. ಶರಣ ಪರಂಪರೆಯ ವಚನ ಸಾಹಿತ್ಯವನ್ನು ಬರೆಯುವ ಮೂಲಕ ಅವರ ತತ್ವ ಸಿದ್ಧಾಂತಗಳು ವಿಶ್ವದಲ್ಲಿ ಪ್ರಸಿದ್ಧಿಯಾಗಿವೆ. ವಿಶ್ವದ ಸಾಂಸ್ಕೃತಿಕ ನಾಯಕರಾಗಿ, ಸಮಾಜ ಸುಧಾರಕರಾಗಿ ಅವರು ಮಾಡಿದಂತ ಸೇವೆ ಅನನ್ಯವಾಗಿದೆ ಎಂದರು.

ಇದೇ ವೇಳೆ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ, ಟಿ.ಯಮುನಾ, ಎಂ.ವಿ.ನಾಗರತ್ನಮ್ಮ, ಎಚ್.ವೇದಪುಷ್ಪ, ಮಂಜಮ್ಮ, ಸಿದ್ದಗಂಗಮ್ಮ, ರಮಾ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಸಂಗೀತ ವಿದುಷಿ ಲಕ್ಷ್ಮೀದೇವಮ್ಮ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಉಪಾಧ್ಯಕ್ಷೆ ನಾಗ ಸುಂದರಮ್ಮ, ಸುಬ್ಬಣ್ಣ ಶೆಟ್ಟಿ, ಶಂಭುಲಿಂಗಪ್ಪ, ಸಾಹಿತಿ ಎಂ.ಕಿರಣ್ ಮಿರಜ್ಕರ್, ಎಂ.ಬಿ.ಲಿಂಗಪ್ಪ, ಪಿ.ಎಂ.ತಿಪ್ಪೇಸ್ವಾಮಿ, ಎನ್.ಜಗದಾಂಬ, ಎನ್.ಬಸವರಾಜು, ಹಾರ್ಮೋನಿಯಂ ವಾದಕ ಎಸ್.ಶಿವಲಿಂಗಪ್ಪ, ತಬಲಾ ವಾದಕ ಬಿ.ಎಸ್.ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.