ಬಸವಣ್ಣನವರು ಕ್ರಾಂತಿಕಾರಿ ಪುರುಷ

| Published : May 10 2024, 11:46 PM IST

ಸಾರಾಂಶ

ಕಾಯಕದ ಮಹತ್ವ ಕುರಿತಾಗಿ ಮನಮುಟ್ಟುವಂತೆ ಬಸವಣ್ಣನವರು ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ. ಕಾಯಕವೇ ಕೈಲಾಸವೆಂಬ ನುಡಿ ಆಚರಣೆಗೆ ತರುವ ಮೂಲಕ ನಾವು ಬಸವಣ್ಣನವರಿಗೆ ಗೌರವ ಸಲ್ಲಿಸಬೇಕು

ಗದಗ:

12ನೇ ಶತಮಾನದ ಮಹಾಕ್ರಾಂತಿಕಾರಿ, ವಿಭೂತಿ ಪುರುಷ ಬಸವಣ್ಣನವರು ಸಾಮಾಜಿಕ ಚಿಂತನೆಗೆ ಒಂದು ಹೊಸ ದೃಷ್ಟಿಕೋನ ಬಿತ್ತಿದವರೆಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಅವರು ಶುಕ್ರವಾರ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಗೊಂಡು ಮಾತನಾಡಿದ ಅವರು, ಕಾಯಕದ ಮಹತ್ವ ಕುರಿತಾಗಿ ಮನಮುಟ್ಟುವಂತೆ ಬಸವಣ್ಣನವರು ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ. ಕಾಯಕವೇ ಕೈಲಾಸವೆಂಬ ನುಡಿ ಆಚರಣೆಗೆ ತರುವ ಮೂಲಕ ನಾವು ಬಸವಣ್ಣನವರಿಗೆ ಗೌರವ ಸಲ್ಲಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಬಸವಣ್ಣನವರ ನುಡಿಯಲ್ಲಿ ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಶುದ್ಧತೆ ಇರಬೇಕೆಂಬುದನ್ನು ಕಾಣುತ್ತೇವೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಮಾತನಾಡಿ, ಶರಣರ ಬದುಕು-ಬರಹ ಅಮೂಲ್ಯವಾದದ್ದು. ನುಡಿದಂತೆ ನಡೆದ ಮಹಾಪುರುಷರು. ಇವರ ಆದರ್ಶಯುತವಾದ ಬದುಕು ಸದಾ ನಮಗೆ ದಾರಿದೀಪ ಎಂದರು.

ಈ ವೇಳೆ 2024ರಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗುಣಮಟ್ಟ ಸುಧಾರಣೆಗೆ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆ ಹಮ್ಮಿಕೊಂಡು ಉತ್ತಮ ಫಲಿತಾಂಶ ಪಡೆಯುವಲ್ಲಿ ಶ್ರಮಿಸಿದ ಬಿಇಒ ಆರ್.ಎಸ್. ಬುರಡಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಮಂಗಳೂರ, ಶ್ಯಾಮ ಲಾಂಡೆ ಹಾಗೂ ಐ.ಬಿ. ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ಇ.ಡಿ. ಹುಗ್ಗೆಣ್ಣವರ, ಆರ್.ಡಿ. ಬೆಣಗಿ ಉಪಸ್ಥಿತರಿದ್ದರು. ದೀಪಾ ಬೇವಿನಮರದ ಮತ್ತು ತನು ಹೂಗಾರ ವಚನ ಪ್ರಾರ್ಥನೆಗೈದರು. ರವಿ ಹೆಬ್ಬಳ್ಳಿ ಸ್ವಾಗತಿಸಿದರು. ವಿ.ಟಿ. ದಾಸರಿ ನಿರೂಪಿಸಿದರು. ಸುಮಾ ಹಚಡದ ವಂದಿಸಿದರು.