ಸಾರಾಂಶ
ಯಳಂದೂರು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾರತದ ಖೋಖೋ ತಂಡದ ಆಟಗಾರ್ತಿ ಚೈತ್ರಾ ಕುರುಬೂರುರನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್. ಕೃಷ್ಣಮೂರ್ತಿ, ಪ್ರಭುಪ್ರಸಾದ್, ಮಹಾದೇವಪ್ಪ ಇದ್ದರು.
ಕನ್ನಡಪ್ರಭ ವಾರ್ತೆ ಯಳಂದೂರು
೧೨ನೇ ಶತಮಾನದ ಸಂತ ಬಸವಣ್ಣನವರು ಅಂತರಂಗದ ಸತ್ಯ ಶೋಧಕರಾಗಿದ್ದಾರೆ. ತಮ್ಮ ವಚನಗಳಲ್ಲಿ ಬರುವ ಎಲ್ಲಾ ನುಡಿಗಳ ನಿಜವಾದ ಅನುಭವಿಯಾಗಿದ್ದು ನಡೆ-ನುಡಿಯಲ್ಲೂ ಅನುಭಾವಿಸಿದ ವಿಶ್ವಜ್ಞಾನಿಯಾಗಿದ್ದಾರೆ ಎಂದು ಎಂಸಿಎನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ ಮಹದೇವಸ್ವಾಮಿ ತಿಳಿಸಿದರು.ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಏಕದೇವೋಪಾಸನೆ, ಕಾಯಕ ತತ್ವವೇ ದೇವರು, ಸಮಾಜದಲ್ಲಿ ಜಾತಿಯಲ್ಲ, ನೀತಿಯೇ ಮುಖ್ಯ ಎಂಬ ನಿಮಯಗಳನ್ನು ಹೇಳಿಕೊಟ್ಟವರು. ತಮ್ಮ ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರು ಲಿಂಗಬೇಧವಿಲ್ಲದೆ ೭೮೦ ಜ್ಞಾನಿಗಳನ್ನು ಒಟ್ಟಿಗೆ ಕೂರಿಸಿ ಆ ಕಾಲದಲ್ಲಿ ಸಂಸತ್ತನ್ನು ನಡೆಸಿ ಜ್ಞಾನ ಭಂಡಾರವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಸನ್ನಿವೇಶವನ್ನು ಸೃಷ್ಟಿಸಿದ್ದ ಮಹಾನ್ ದಾರ್ಶನಿಕರಾಗಿದ್ದರು. ಇವರ ಕಳಬೇಡ, ಕೊಲಬೇಡ ವಚನದಲ್ಲಿ ಸರಳವಾಗಿ ಹೇಳಿರುವ ಸಪ್ತ ಸೂತ್ರಗಳನ್ನು ನಾವು ಅಳವಡಿಸಿಕೊಂಡರೆ ಪರಿಪೂರ್ಣ ಮನುಷ್ಯರಾಗಿ ಬದಲಾಗಬಹುದು. ಇದು ಎಂದೆಂದಿಗೂ ಪ್ರಸ್ತುತವಾಗಿರುತ್ತವೆ ಎಂದರು.ಕಾರಾಪುರ ವಿರಕ್ತ ಮಠಾಧ್ಯಕ್ಷ ಶ್ರೀ ಬಸವರಾಜಸ್ವಾಮಿ ಒಡೆಯರ್ ಮಾತನಾಡಿ, ಬಸವಣ್ಣ ವಿಶ್ವ ಕಂಡ ಮಹಾನ್ ಜ್ಞಾನಿಯಾಗಿದ್ದರು. ೮೦೦ ವರ್ಷಗಳ ಹಿಂದೆಯೇ ಸಮಾಜ ಹೀಗೆಯೇ ಇರಬೇಕು ಎಂದು ಮೆಟ್ಟಿಲು ಹಾಕಿಕೊಟ್ಟ ಮಹಾನ್ ದಾರ್ಶನಿಕರಾಗಿದ್ದರು. ಒಬ್ಬ ರಾಜಕಾರಣಿಯಾಗಿ, ವಿಜ್ಞಾನಿಯಾಗಿ, ಸಂಗೀತಗಾರನಾಗಿ, ಸಾಹಿತಿಯಾಗಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ರಂಗಗಳನ್ನೂ ಪ್ರಖರವಾಗಿ ಅರಿತು. ಸಮಾಜದ ಡೊಂಕನ್ನು ತಿದ್ದಿದ ಮಹಾನ್ ದಾರ್ಶನಿಕರಾಗಿದ್ದಾರೆ. ಇವರ ವಚನಗಳಿಗೆ ಎಂದೆಂದಿಗೂ ಮುಪ್ಪಿಲ್ಲ. ಇದು ಸದಾ ಅಚ್ಚ ಹರಿರಾಗಿರುತ್ತದೆ. ಆದರೆ ಈ ಮಾರ್ಗದಲ್ಲಿ ನಾವು ಸಾಗುವ ಕೆಲಸವಾಗಬೇಕು ಎಂದ ನುಡಿದರು.ಇದಕ್ಕೂ ಮುಂಚೆ ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ ಡೊಳ್ಳು, ನಂದಿಕಂಬ, ಮಂಗಳವಾದ್ಯ, ಗೊರುಕನ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇದಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಸ್ಪರ್ಧಿ ಚೈತ್ರಾ ಕುರುಬೂರು ಅವರಿಗೆ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷ ಎಸ್.ಪ್ರಭುಪ್ರಸಾದ್, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಜಿ.ಮಹಾದೇವಪ್ಪ ಕಾರ್ಯದರ್ಶಿ ಪ್ರಭುಸ್ವಾಮಿ ಪಪಂ ಅಧ್ಯಕ್ಷೆ ಎಸ್.ಲಕ್ಷ್ಮಿಮಲ್ಲು, ಸದಸ್ಯರಾದ ಸುಶೀಲಾಪ್ರಕಾಶ್, ಲಿಂಗರಾಜಮೂರ್ತಿ, ಮುನವ್ವರ್‌ಬೇಗ್, ಶ್ರೀಕಂಠಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಮಹೇಶ್ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ದೈಹಿಕ ಶಿಕ್ಷಕ ಪರಿವೀಕ್ಷ ಶಾಂತಮೂರ್ತಿ, ರೇಚಣ್ಣ ಸೇರಿದಂತೆ ಅನೇಕರು ಹಾಜರಿದ್ದರು.