ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಸಿದ್ದ ಬಸವಣ್ಣನವರು: ಪ್ರಶಾಂತಶೆಟ್ಟಿ

| Published : Feb 18 2024, 01:37 AM IST / Updated: Feb 18 2024, 01:38 AM IST

ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಸಿದ್ದ ಬಸವಣ್ಣನವರು: ಪ್ರಶಾಂತಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕರ ಭಾವಚಿತ್ರ ಅನಾವರಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

12 ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಜಾತೀಯತೆ, ಮೇಲು-ಕೀಳು, ಬಡವ-ಬಲ್ಲಿದ, ಮೂಡನಂಬಿಕೆ, ಕಂದಾಚಾರ ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ್ದ ವಿಶ್ವಗುರು ಬಸವಣ್ಣನವರ ಪಾತ್ರ ಅನನ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ಅವರು ಶನಿವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕರ ಭಾವ ಚಿತ್ರ ಅನಾವರಣಗೊಳಿಸಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವಮಂಟಪ ಸ್ಥಾಪಿಸಿ ತಳ ಸಮುದಾಯವರಿಗೆ, ಮಹಿಳೆಯರಿಗೆ, ಶೋಷಿತವರ್ಗದವರಿಗೆ ಅವಕಾಶ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಬಸವಣ್ಣನವರು ಮಾಡಿದ್ದರು. ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕು ಡೊಂಕು ತಿದ್ದಲು ಪ್ರಯತ್ನಿಸಿದರು. ಅವರ ತತ್ವಾದರ್ಶ, ವಚನ ಸಾಹಿತ್ಯ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಅವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಅನಾವರಣಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ.

ಬುದ್ಧ, ಬಸವಣ್ಣ, ಅಂಬೇಡ್ಕರ್ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಜೀವನ ಚರಿತ್ರೆ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಪಪಂ ವತಿಯಿಂದಲೂ ಈ ಹಿಂದೆ ಪಟ್ಟಣದ ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣಕ್ಕೆ ಮಹನೀಯರ ಹೆಸರು ಇಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಮಾಡಲಾಗಿದ್ದು, ಪಟ್ಟಣ ಬಸ್ತಿಮಠದ ಸಮೀಪವಿರುವ ಬಸ್ ತಂಗುದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರನ್ನು ಇಡಲಾಗಿದೆ ಎಂದರು.

ತಹಸೀಲ್ದಾರ್ ತನುಜಾ.ಟಿ.ಸವದತ್ತಿ ಮಾತನಾಡಿ, ಪ್ರಸ್ತುತ ಭಾರತದ ಸಂವಿಧಾನದಲ್ಲಿರುವ ಬಹುತೇಕ ಎಲ್ಲಾ ಆಶಯ ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಾರಿದ್ದರು. ಜಾತಿ, ಧರ್ಮ, ಮೇಲು-ಕೀಳು ಎಂಬ ಮನೋಭಾವನೆ ಬೇಡ. ಮನುಷ್ಯನ ಜಾತಿ ಒಂದೇ ಎಂದು ಸಾರಿದ್ದರು. ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ಆದ್ಯತೆ ನೀಡಿದ್ದರು. ವಚನಗಳ ಮೂಲಕ ಸಮಾಜ ಜಾಗೃತಿಗೊಳಿಸಿದ ಶರಣ ಶ್ರೇಷ್ಠ ಆದರ್ಶಗುರು ಬಸವೇಶ್ವರರು. ಸರ್ಕಾರದ ಆದೇಶದಂತೆ ಒಂದೇ ಮಾದರಿಯಯ ಬಸವಣ್ಣನವರ ಭಾವ ಚಿತ್ರವನ್ನು ಎಲ್ಲಾ ಇಲಾಖೆಗಳಲ್ಲೂ ಅಳವಡಿಸಲಾಗುತ್ತಿದೆ ಎಂದರು.

ಪಪಂ ಸದಸ್ಯೆ ಜುಬೇದಾ ಮಾತನಾಡಿ, ಬಸವಣ್ಣನವರು ಮಹಾನ್ ಮಾನವತಾವಾದಿಯಾಗಿದ್ದರು. ಅವರ ಆದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಅತಿಥಿಗಳಾಗಿ ಪಪಂ ಸದಸ್ಯರಾದ ಸುರಯ್ಯಬಾನು, ಶೋಜಾ, ಕುಮಾರಸ್ವಾಮಿ,ಸೈಯದ್ ವಸೀಂ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ತಾ.ಛಲವಾದಿ ಸಮಾಜದ ಅಧ್ಯಕ್ಷ ಡಿ.ರಾಮು, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಬಾಳೆಹೊನ್ನೂರು ನಾಗರಾಜ್, ಸಿಬ್ಬಂದಿ ಲಕ್ಷ್ಮಣಗೌಡ, ಉಷಾ, ವಿಜಯಕುಮಾರ್, ಮಮತಾ ಮತ್ತಿತರರಿದ್ದರು.