ಸಾರಾಂಶ
ಮುಂಡರಗಿ: ಬಸವಣ್ಣನವರು ಪುರುಷರಿಗೆ ಎಷ್ಟು ಭಕ್ತ ಭಂಡಾರಿಯೋ ಅಷ್ಟೆ ಮಹಿಳೆಯರಿಗೂ ಭಕ್ತಿಬಂಡಾರಿ. 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಪುರುಷರಿಗೆ ತಕ್ಕ ಹಾಗೆ ಮಹಿಳೆಯರಿಗೂ ಸ್ಥಾನ-ಮಾನ ಕಲ್ಪಿಸಿದವರು. ಮೇಲು-ಕೀಳು ಎನ್ನುವುದಕ್ಕಿಂತ ಜಾತಿಯನ್ನೇ ಬೇರುಸಮೇತ ಕಿತ್ತು ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಶ್ರಮಿಸಿದ ಬಸವಣ್ಣ ಸಮಾಜ ಸುಧಾರಕರಾಗಿ ಕಂಗೊಳಿಸಿದರು ಎಂದು ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಹೇಳಿದರು.
ನಗರದ ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದಲ್ಲಿ ಜರಗುತ್ತಿರುವ ಶರಣ ಚರಿತಾಮೃತ ಪ್ರವಚನದಲ್ಲಿ ಅವರು ಮಾತನಾಡಿದರು.ದುಡಿದವನಿಗೆ ಮಾತ್ರ ಉಣ್ಣುವ ಹಕ್ಕಿದೆ ಎಂದು ಕಾಯಕಕ್ಕೆ ಮಹತ್ವ ನೀಡಿದರು. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎನ್ನುವಂತೆ ಜಗದಗಲ-ಮಿಗಿಯಗಲವಾಗಿರುವ ಇಷ್ಟಲಿಂಗವನ್ನು ಕರುಣಿಸಿ ಇಷ್ಟಲಿಂಗೋಪಾಸನೆಯನ್ನು ಬೋಧಿಸಿದರು. ಶೀಲ ಇದ್ದವ ಶೀಲವಂತ, ಗುಣ ಇದ್ದವ ಗುಣವಂತ, ಹಣ ಇದ್ದವ ಹಣವಂತ ಅನ್ನುವಂತೆ ಲಿಂಗ ಇದ್ದವ ಲಿಂಗವಂತ. ಯಾವ ಜಾತಿ-ಗೀತಿಯನ್ನು ಗಮನಿಸದೆ ಎಲ್ಲರಿಗೂ ಇಷ್ಟಲಿಂಗವನ್ನು ಕಟ್ಟಿ ಲಿಂಗಾಯತ ಧರ್ಮದ ಸಂಸ್ಥಾಪಕರಾದರು. ಶರಣ ಧರ್ಮವ ಸ್ಥಾಪಿಸಿದರು ಎಂದರು.ಕಣ್ಣಿಗೆ ಕಾಣದ ವಸ್ತುವಿಗಾಗಿ ಹವಣಿಸುವವರು ಸಾಕಷ್ಟು ಜನ. ಆದರೆ ಕಂಡದ್ದನ್ನು ಗೌರವಿಸುವವರು ಬಹಳ ಕಡಿಮೆ ಜನರು. ಇಷ್ಟಲಿಂಗವೇ ಪರಶಿವನೆ ಸದ್ಗುರು ಸ್ವರೂಪನಾಗುತ್ತಾನೆ. ಅಂಗೈಯಲ್ಲಿಯ ಇಷ್ಟಲಿಂಗ ಜಂಗಮ, ಪ್ರಸಾದ ಸಕಲ ವಿದ್ಯಾ ಸ್ವರೂಪವಾಗಿ ತೋರುತ್ತದೆ. ಇಂತ ಇಷ್ಟಲಿಂಗದ ಘನತೆಯನ್ನು ಅರಿಯಬೇಕು. ಈ ಲಿಂಗದೊಡಲೊಳಗೆ ಭೂ ಲೋಕವೇ ಅಡಗಿದ್ದು, ಭೂ ಲೋಕದೊಳಗೆ ಅಸ್ತಿತ್ವವನ್ನು ಹೊಂದಿದ ಇಷ್ಟಲಿಂಗದ ಅನುಸಂದಾನವನ್ನು ಮಾಡಿ ಧನ್ಯವಾಗುವುದೇ ಮಾನವ ಜೀವನದ ಸಾಫಲ್ಯ ಎಂದರು.