ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ

| Published : Jul 11 2025, 12:32 AM IST

ಸಾರಾಂಶ

ಬಸವಣ್ಣನವರು ಮನುಷ್ಯರಾದರೂ ನಮ್ಮೆಲ್ಲರ ಜತೆಗೆ ಅವರನ್ನು ಹೋಲಿಕೆ ಮಾಡಲು ಬರುವುದಿಲ್ಲ

ಮುಂಡರಗಿ: ವಿಶ್ವಗುರು ಬಸವಣ್ಣನವರು ನಮ್ಮಂತೆ ತಂದೆ ತಾಯಿಯ ಉದರದಲ್ಲಿ ಜನಿಸಿದರೂ ಈ ಜಗತ್ತನ್ನು ನೋಡುವ ದೃಷ್ಠಿಯೇ ಬೇರೆ, ನಾನು ನೋಡುವ ದೃಷ್ಠಿಯೇ ಬೇರೆ. ಅವರು ಜಾತ್ಯಾತೀತವಾಗಿ ಎಲ್ಲ ಜಾತಿ, ಧರ್ಮದವರನ್ನೂ ಒಂದೇ ಸಮನಾಗಿ ನೋಡಿಕೊಂಡು ಬರುತ್ತಿದ್ದರು. ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.

ಅವರು ಬುಧವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಶರಣ ಚರಿತಾಮೃತ ಪ್ರವಚನದಲ್ಲಿ ಮಾತನಾಡಿದರು.

ಬಸವಣ್ಣನವರು ಮನುಷ್ಯರಾದರೂ ನಮ್ಮೆಲ್ಲರ ಜತೆಗೆ ಅವರನ್ನು ಹೋಲಿಕೆ ಮಾಡಲು ಬರುವುದಿಲ್ಲ. ಬಸವಣ್ಣನವರು ಹುಟ್ಟುತ್ತಲೇ ದಲಿತ ವ್ಯಕ್ತಿಯೊಬ್ಬರಿಗೆ ಆಗುತ್ತಿದ್ದ ಶಿಕ್ಷೆ ತಪ್ಪಿಸಿದ್ದರು. ಅವರು ಚಿಕ್ಕವರಿರುವಾಗಲೇ ದೊಡ್ಡ ದೊಡ್ಡ ವಿಚಾರ ಮಾಡುತ್ತಿದ್ದರು. ತಂದೆ ತಾಯಿಯನ್ನು ಅನೇಕ ಪ್ರಶ್ನೆ ಕೇಳುತ್ತಿದ್ದರು. ತಮಗೆ ಹಾಕುವ ಜನಿವಾರವನ್ನು ಅಕ್ಕನಿಗೂ ಹಾಕುವಂತೆ ಬಂಡಾಯವೆದ್ದಿದ್ದರು. ಹತ್ತಾರು ದೇವರನ್ನು ಪೂಜಿಸಿದರೆ ಫಲ ಸಿಗುವುದಿಲ್ಲ. ಒಂದೇ ದೇವರನ್ನು ಪೂಜಿಸಬೇಕೆಂದು ಚಿಕ್ಕವರಿರುವಾಗಲೇ ತಮ್ಮ ತಂದೆಗೆ ತಿಳಿವಳಿಕೆ ಮಾತು ಹೇಳಿದ್ದರು.

ಮನೆಯಲ್ಲಿ ಅವರ ಮಾತಿಗೆ ಮನ್ನಣೆ ದೊರೆಯದೇ ಹೋದಾಗ ಬಸವಣ್ಣನವರು ಮನೆ ತೊರೆದು ಕೂಡಲಸಂಗಮಕ್ಕೆ ಬಂದರು. ಅನೇಕ ವರ್ಷಗಳ ಕಾಲ ಹೋರಾಟ ಮಾಡುವ ಮೂಲಕ ಕೂಡಲ ಸಂಗಮದಲ್ಲಿ ನಡೆಯುತ್ತಿದ್ದ ಮೇಲು-ಕೀಳು ಹಾಗೂ ಜಾತಿ ವ್ಯವಸ್ಥೆ ಹೊಡೆದೋಡಿಸುವಲ್ಲಿ ಯಶಸ್ವಿಯಾದರು. ನಾವು ಇಂದು ಮೂಢನಂಬಿಕೆ, ಕಂದಾಚಾರಗಳಿಂದ ಧರ್ಮ, ದೇವರಿಂದ ದೂರವಾಗುತ್ತಿದ್ದೇವೆ. ಇವುಗಳ ವಿರುದ್ಧ 12ನೇ ಶತಮಾನದಲ್ಲಿಯೇ ಬಸವಣ್ಣನವರು ಹೋರಾಟ ಮಾಡಿದರು.ಅವರ ತತ್ವಾದರ್ಶಗಳನ್ನು ಎಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.