ಬಸವಣ್ಣನವರ ಕಾಯಕಯೋಗಿ ಸಂದೇಶ ಮಾದರಿ

| Published : May 01 2025, 12:49 AM IST

ಸಾರಾಂಶ

೧೨ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸಮ ಸಮಾಜ ಕಟ್ಟಿದ ಕೀರ್ತಿ ಜಗಜ್ಯೋತಿ ಬಸವೇಶ್ವರ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ.

ಕೊಪ್ಪಳ(ಯಲಬುರ್ಗಾ):

ಬಸವಣ್ಣನವರು ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶ ನೀಡಿದರು ಎಂದು ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ ಹೇಳಿದರು.ಯಲಬುರ್ಗಾ ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ತಾಲೂಕಾಡಳಿತ ಹಾಗೂ ಮೊಗ್ಗಿಬಸವೇಶ್ವರ ಜಾತ್ರೆ ಸಮಿತಿ ವತಿಯಿಂದ ಜರುಗಿದ ವಿಶ್ವಗುರು ಬಸವ ಜಯಂತಿ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ಜರುಗಿದ 16 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

೧೨ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸಮ ಸಮಾಜ ಕಟ್ಟಿದ ಕೀರ್ತಿ ಜಗಜ್ಯೋತಿ ಬಸವೇಶ್ವರ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ. ಜಾತಿ ತಾರತಮ್ಯ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲ ಶರಣರು ವಚನಗಳಿಂದ ಸಮಾಜ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟು ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಇಡೀ ವಿಶ್ವವೇ ಅವರ ಕಾಯಕಯೋಗಿ ಸಂದೇಶ ಪ್ರೇರಣೆಯಾಗಿದೆ ಎಂದು ಹೇಳಿದರು.

ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ಮಾನವ ಮಾನವರಾಗಿ ಬದುಕೇಬೇಕೆಂಬ ಸಂದೇಶ ಸಾರಿದ ಬಸವಣ್ಣನವರ ತ್ಯಾಗ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ನಿರ್ಮೂಲನೆಯಲ್ಲಿ ಬಸವಣ್ಣವರು ಮೊದಲಿಗರಾಗಿದ್ದಾರೆ. ಶತ-ಶತಮಾನ ಕಳೆದರೂ ಬಸವಣ್ಣನವರು ಹಾಕಿ ಕೊಟ್ಟರುವ ಮಾರ್ಗದಲ್ಲಿ ನಡೆಯಬೇಕು. ವ್ಯಕ್ತಿ-ಜಾತಿ ದೊಡ್ಡದಲ್ಲ, ಮಾನವೀಯ ಮೌಲ್ಯ ಅಳವಡಿಸಿಕೊಂಡು ಬದುಕಬೇಕು ಎಂದರು.

ಬಿಜೆಪಿ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನಿಂದ ಬದುಕಬೇಕೆಂಬ ಮಾರ್ಗವನ್ನು ಬಸವೇಶ್ವರ ತೋರಿಸಿಕೊಟ್ಟಿದ್ದಾರೆ. ಅವರ ಶರಣ ಚಿಂತನೆಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸ್ವಾರ್ಥಗೊಳ್ಳುತ್ತದೆ ಎಂದು ಹೇಳಿದರು.

ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಮುಖಂಡ ಸಂಗಪ್ಪ ಕೊಪ್ಪಳ ಜಾತ್ರಾ ಸಮಿತಿ ಸದಸ್ಯ ಸುರೇಶಗೌಡ ಶಿವನಗೌಡ್ರು, ಮಂಜುನಾಥ ಅಧಿಕಾರಿ ಮಾತನಾಡಿದರು. ಸ್ಥಳೀಯ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ದ್ಯಾಮಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ತುಲಾಭಾರ ಸೇವೆ ನಡೆಯಿತು.

ಪಪಂ ಮುಖ್ಯಾಧಿಕಾರಿ ನಾಗೇಶ, ಪ್ರಮುಖರಾದ ಅಂದಾನಗೌಡ ಉಳ್ಳಾಗಡ್ಡಿ, ವೀರನಗೌಡ ಬನ್ನಪ್ಪಗೌಡ್ರು, ಸುಧೀರ್ ಕೊರ್ಲಹಳ್ಳಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರೆಡ್ಡಿ, ಮೈಲಾರಗೌಡ ತಳುವಗೇರಿ, ದಾನನಗೌಡ ತೊಂಡಿಹಾಳ, ಸಂಗಪ್ಪ ರಾಮತ್ನಾಳ, ಶರಣಪ್ಪ ಅರಕೇರಿ, ಬಸವರಾಜ ಅಧಿಕಾರಿ, ಅಮರೇಶ ಹುಬ್ಬಳ್ಳಿ, ಸಿದ್ರಾಮೇಶ ಬೇಲೇರಿ, ರೇವಣೆಪ್ಪ ಹಿರೇಕುರುಬರ, ಷಣ್ಮುಖಪ್ಪ ರಾಂಪೂರ, ದೊಡ್ಡಯ್ಯ ಗುರುವಿನ, ಮೆಹಬೂಬಸಾಬ್‌ ಮಂಕಾದರ, ಕಲ್ಲನಗೌಡ ಓಜನಹಳ್ಳಿ, ಅಡಿವೆಯ್ಯ ಕಲ್ಯಾಣಮಠ ಇದ್ದರು.ಯಲಬುರ್ಗಾ ಪುಣ್ಯದ ಭೂಮಿ. ₹ ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಹಾರಥೋತ್ಸವ ಪಂಚ ಕಳಸದ ಮೂಲಕ ನೆರವೇರಿದ್ದು ಜನತೆಗೆ ಒಳಿತಾಗಲಿದೆ. ಧರ್ಮದ ಕಾರ್ಯಗಳು ನಡೆಸಿದಾಗ ಪುಣ್ಯ ವೃದ್ಧಿಯಾಗಲಿದೆ. ನವ ದಂಪತಿ ಆದರ್ಶ ಬದುಕು ನಡೆಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ, ಗುಣ ಕಲಿಸಬೇಕು.

ಶ್ರೀಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾಶ್ರಮ ಗದಗ