ಶಿರ್ವ ಹಿಂದೂ ಶಾಲೆಗೆ ಬಸವಣ್ಣ ಭಾವಚಿತ್ರ ಕೊಡುಗೆ

| Published : May 16 2024, 12:48 AM IST

ಸಾರಾಂಶ

ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ನಿರಂಜನ್ ಚೋಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ವಸಂತಿ ನಾಯ್ಕ ಅವರಿಗೆ ಬಸವಣ್ಣ ಅವರ ಭಾವಚಿತ್ರವನ್ನು ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಶಿರ್ವ

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಕ್ಕೆ ಒಳಪಟ್ಟ ಹಿಂದೂ ಪ್ರೌಢಶಾಲೆಗೆ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಭಾವಚಿತ್ರವನ್ನು ಶಾಲೆಯ ಹಳೆಯ ವಿದ್ಯಾರ್ಥಿ ರಾಮಾಂಜಿ ನಮ್ಮಭೂಮಿ ಇತ್ತೀಚೆಗೆ ಕೊಡುಗೆಯಾಗಿ ನೀಡುವ ಮೂಲಕ ಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.

ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ನಿರಂಜನ್ ಚೋಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ವಸಂತಿ ನಾಯ್ಕ ಅವರಿಗೆ ಬಸವಣ್ಣ ಅವರ ಭಾವಚಿತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿರಂಜನ್ ಅವರು ಶಾಲೆಯ ಗ್ರಂಥಾಲಯಕ್ಕೆ ವಚನ ಸಾಹಿತ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಬಸವಣ್ಣ ಕುರಿತು ಮಾತನಾಡಿ, ಪ್ರಸ್ತುತ ಸಮಾಜಕ್ಕೂ ಬಸವಣ್ಣ ಅವರ ವಿಚಾರಗಳು ಅತೀ ಅಗತ್ಯವಾಗಿದ್ದು, ಮುಖ್ಯವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಕಿಲಾ ಶೆಟ್ಟಿ, ಉಡುಪಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ನಿವೃತ್ತ ವ್ಯವಸ್ಥಾಪಕ ಎಚ್. ನರಸಿಂಹ ಮೂರ್ತಿ, ಕಲಾವಿದರಾದ ಮನೋಜ್ ಕೋಟ್ಯಾನ್, ಸಜನ್, ಸವಿನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಸ್ವಾಗತಿಸಿದರು. ಶಿಕ್ಷಕಿ ಸುಪ್ರಿತಾ ವಂದಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು‘ಗಾಂಧಿ, ಅಂಬೇಡ್ಕರ್, ಬಸವಣ್ಣ, ಬುದ್ದ, ಕುವೆಂಪು ಮುಂತಾದ ದಾರ್ಶನಿಕರ ವಿಚಾರ ಧಾರೆಗಳನ್ನು ಯುವಜನತೆ ಕಡೆಗೆ ಕೊಂಡೊಯ್ಯುವ ಮೂಲಕ ಅವರಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಮೂಡಿಸಿ, ಸಮಾಜ ಮುಖಿ ಚಿಂತನೆ ಮಾಡುವಂತೆ ಮಾಡುವುದು ನನ್ನ ಉದ್ದೇಶವಾಗಿದೆ. ಅದಕ್ಕಾಗಿ ಬಸವಣ್ಣ ಅವರ ಭಾವಚಿತ್ರವನ್ನು ನಾನು ಕಲಿತ ಶಾಲೆಗೆ ನೀಡಿದ್ದೇನೆ’-ರಾಮಾಂಜಿ ನಮ್ಮಭೂಮಿ