ಸಾರಾಂಶ
ತಾಲೂಕಿನ ಬಸವಂತವಾಡಿ ಗ್ರಾಮದಲ್ಲಿ 2017-18ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕಡಗಂಚೆ ಬಸ್ ನಿಲ್ದಾಣ ಎದುರಿನ ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನೆ ಕೈಗೊಂಡ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ಬಸವಂತವಾಡಿ ಗ್ರಾಮದಲ್ಲಿ 2017-18ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕಡಗಂಚಿ ಬಸ್ ನಿಲ್ದಾಣ ಎದುರಿನ ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನೆ ಕೈಗೊಂಡ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಹೆದ್ದಾರಿ ತಡೆಯಿಂದಾಗಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಪ್ರತಿಭಟನಾ ಸ್ಥಳಕ್ಕೆ ನಿಂಬರಗಾ ನಾಡ ತಹಸೀಲ್ದಾರ ಮಹೇಶ ಅವರು ಆಗಮಿಸಿ ಮನವಿ ಸ್ವೀಕರಿಸಿದ ಅವರು, ಬೇಡಿಕೆ ಈಡೇರಿಕೆಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.
ಗ್ರಾಮದ ಶ್ರೀ ಮಹಾರಾಯ ಮಂದಿರದಿಂದ ಬಸವೇಶ್ವರ ವೃತ್ತದ ವರೆಗೆ 175 ಮೀಟರ್ ಮತ್ತು ಸಾತಯ್ಯ ಪರತಯ್ಯ ಸ್ವಾಮಿ ಅವರ ಮನೆಯವರೆಗೆ 75 ಮೀಟರ್ ಉದ್ದದ ರಸ್ತೆಯನ್ನು ಹಾಗೂ ಕುಡಿವ ನೀರಿನ ಟ್ಯಾಂಕ್‍ನಿಂದ ಮುಖ್ಯ ರಸ್ತೆವರೆಗೆ 75 ಮೀ. ಸಿಸಿ ರಸ್ತೆ. ಚರಂಡಿ ನಿರ್ಮಾಣ ಮಾಡಬೇಕಿತ್ತು. ಆದರೆ ಕಾಮಗಾರಿ ಅರ್ಧಕ್ಕೆ ಕೈಬಿಡಲಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದರು.ಕಾಮಗಾರಿಗೆ ಒಟ್ಟು 76.97 ಲಕ್ಷ ರು.ಗಳ ಅನುದಾನದ ಕಾಮಗಾರಿ ಇವಾಗಿದ್ದು, ಕೆಲಸ ಪೂರ್ಣಗೊಳಿಸಿಲ್ಲ. ಅಲ್ಲದೆ ಕಾಮಗಾರಿಗಳು ಕಳಪೆಯಿಂದ ನಡೆದಿವೆ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಪ್ರಮುಖರಾದ ಬಸವರಾಜ ಬಿರಾದಾರ. ಸಿದ್ಧಾರೂಢ ಅಟ್ಟೂರ, ಶರಣಬಸಪ್ಪ ಬಿರಾದಾರ, ಸಿದ್ದಣ್ಣ ಬಿರಾದಾರ, ಸಿದ್ಧಪ್ಪ ಕೆರೂರ, ಮಹಾದೇವಪ್ಪ ನೆಲ್ಲೂರ, ಭೀಮಾಶಂಕರ ಬಿರಾದಾರ ಇತರರಿದ್ದರು. ಬಿರಾದಾರ, ಗುಂಡಪ್ಪ ಪೂಜಾರಿ, ಮಲ್ಲಿನಾಥ ನೆಲ್ಲೂರ, ಭೀಮಾಶಂಕರ ಬಿರಾದರ ಮತ್ತು ಮಹಿಳೆರು ಸೇರಿ ಇನ್ನಿತರರು ಇದ್ದರು.