ಬಸವಪುರಾಣ ಜಗತ್ತಿಗೆ ಬೆಳಕು ನೀಡುವ ಸಂದೇಶ: ಸುತ್ತೂರು ಶ್ರೀ

| Published : Dec 18 2024, 12:47 AM IST

ಬಸವಪುರಾಣ ಜಗತ್ತಿಗೆ ಬೆಳಕು ನೀಡುವ ಸಂದೇಶ: ಸುತ್ತೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಮಠಮಾನ್ಯಗಳು ಶೈಕ್ಷಣಿಕ ಪ್ರಗತಿ ಸಾಧಿಸಿವೆ. ಬಸವಪುರಾಣ ಜಗತ್ತಿಗೆ ಬೆಳಕನ್ನು ನೀಡುವ ಸಂದೇಶವಾಗಿದೆ.

ಕನ್ನಡಪ್ರಭ ವಾರ್ತೆ ಅಮೀನಗಡ

ತತ್ವಶಾಸ್ತ್ರದಲ್ಲಿ ಗ್ರೀಕ್ ದೇಶಕ್ಕಿಂಥ ಪುರಾತನವಾದುದು ಭಾರತ. ಭಾರತಲ್ಲಿ ಹುಟ್ಟಿದ ಸಂತಮಹಾಂತರು ಜಗತ್ತಿಗೆ ಜ್ಞಾನದೀವಿಗೆಯಾದ ಆಧ್ಯಾತ್ಮದ ಹಾದಿ ತೋರಿದ್ದಾರೆ ಎಂದು ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಶ್ರೀಗಳ ಜನ್ಮಶತಮಾನೋತ್ಸವದ ನಿಮಿತ್ತ ನಡೆದ ಬಸವಪುರಾಣ ಪ್ರಾರಂಭೋತ್ಸವದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಜಗತ್ತಿಗೆ ಭೌತಶಾಸ್ತ್ರ, ಖಗೋಳಶಾಸ್ತ್ರಗಳ ಪ್ರಾಕೃತಿಕ ಸತ್ಯ ಜಗತ್ತಿಗೆ ತೋರಿದ ಭಾರತದ, ಪರಂಪರೆ, ಸಂಸ್ಕೃತಿ ಸಂಪದ್ಭರಿತವಾದುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರಾಚೀನ ಸಂಸ್ಕೃತಿ ಹರಿದಾಡಿದೆ. ದೇಶದ ಪ್ರತಿಯೊಬ್ಬರಲ್ಲೂ ಆಧ್ಯಾತ್ಮಿಕ ಶಕ್ತಿ ಒಂದಿಲ್ಲೊಂದು ರೀತಿಯಿಲ್ಲಿ ರಕ್ತದ ನರನಾಡಿಗಳಲ್ಲಿ ಹರಿದಾಡುತ್ತಿದೆ. ಆಧ್ಯಾತ್ಮ ಭಕ್ತ ಭಗವಂತನ ನಡುವಿನ ಸಂಪರ್ಕ. ದಯೆಯೇ ಧರ್ಮದ ಮೂಲವಯ್ಯ ಎನ್ನುವ ಮೂಲಕ ಬಸವಣ್ಣನವರು ಜಗತ್ತಿಗೆ ಶಾಂತಿ, ಪ್ರೀತಿ, ದಯೆಗಳ ಅಂತರಂಗದ ಸಂದೇಶ ನೀಡಿದ್ದಾರೆ. ನರೆಹೊರೆ ರಾಷ್ಟ್ರಗಳಲ್ಲಿ ಇವುಗಳು ಇಲ್ಲದ ಕಾರಣ ಇಂದು ಆ ದೇಶಗಳು ಶಾಂತಿ, ನೆಮ್ಮದಿ ಇಲ್ಲದೆ ರಕ್ತಪಾತದಿಂದ ನರಳುತ್ತಿದೆ ಎಂದರು.

ಕರ್ನಾಟಕದ ಮಠಮಾನ್ಯಗಳು ಶೈಕ್ಷಣಿಕ ಪ್ರಗತಿ ಸಾಧಿಸಿವೆ. ಬಸವಪುರಾಣ ಜಗತ್ತಿಗೆ ಬೆಳಕನ್ನು ನೀಡುವ ಸಂದೇಶವಾಗಿದೆ. ಲಿಂ.ರಾಜಗುರು ಪ್ರಭುರಾಜೇಂದ್ರಶ್ರೀಗಳು ಈ ಭಾಗದಲ್ಲಿ ಮಾಡಿದೆ ಸಾಧನೆ ಪ್ರತೀಕವಾಗಿ ಅವರ ಜನ್ಮಶತಮಾನೋತ್ಸವ, ಇಂದಿನ ಶ್ರೀಗಳ, ಜನ್ಮಸುವರ್ಣ ಮಹೋತ್ಸವ ಕಾಕತಾಳೀಯವಾಗಿದ್ದು ಎಲ್ಲ ಕಾರ್ಯಕ್ರಮಗಳೂ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಮುಂಡರಗಿ ನಾಡೋಜ ಅನ್ನದಾನೀಶ್ವರಶ್ರೀಗಳು ಜ್ಯೋತಿಬೆಳಗುವ ಮೂಲಕ ಬಸವ ಪುರಾಣಕ್ಕೆ ಚಾಲನೆ ನೀಡಿದರು. ಕುಮಾರ ವಿರೂಪಾಕ್ಷಶ್ರೀಗಳು ಪುರಾಣ ಪ್ರವಚನ ಪ್ರಾರಂಭಿಸಿದರು. ಶಂಕರರಾಜೇಂದ್ರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಸಿಂದಗಿ ಪ್ರಭುಸಾರಂಗ ಶಿವಾಚಾರ್ಯರು, ಕಮತಗಿ ಹುಚ್ಚೇಶ್ವರ ಶ್ರೀಗಳು, ಶಿವಗಂಗೆ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯರು, ಮುನವಳ್ಳಿಯ ಮುರುಗೇಂದ್ರ ಶ್ರೀಗಳು ಹಾಗೂ ವಿವಿಧ ಹರಗುರುಚರಮೂರ್ತಿಗಳು ಭಾಗವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕ ರಾಜಶೇಖರ ಶೀಲವಂತ್, ಸಿ.ಡಿ.ಇಳಕಲ್ಲ, ಐ.ಎಸ್.ಲಿಂಗದಾಳ, ಗೋಪಾಲ ಪೂಜಾರಿ, ಸುರೇಶ ಪಾಟೀಲ ಇತರರು ವೇದಿಕೆಯಲ್ಲಿದ್ದರು. ಆರ್.ಜಿ.ಸನ್ನಿ ಸ್ವಾಗತಿಸಿ, ನಿರೂಪಿಸಿದರು.