ದೇವೇಗೌಡರಿಂದ ಸಾಕಷ್ಟು ಕಲಿತಿದ್ದೇನೆ: ಮಾಜಿ ಸಿ.ಎಂ. ಬೊಮ್ಮಾಯಿ

| Published : Mar 01 2024, 02:16 AM IST

ದೇವೇಗೌಡರಿಂದ ಸಾಕಷ್ಟು ಕಲಿತಿದ್ದೇನೆ: ಮಾಜಿ ಸಿ.ಎಂ. ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಲಿಂಗಶೆಟ್ಟಿ ವಿರಚಿತ ಮಣ್ಣಿನ ಮಗ ನಾನು ಕಂಡಂತೆ - ನಾಡು ಕಂಡಂತೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಬೊಮ್ಮಾಯಿ ದೇವೇಗೌಡರಿಂದ ಸಾಕಷ್ಟು ಕಲಿತಿರುವುದಾಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ದೆಹಲಿ ಕೆಂಪು ಕೋಟೆಯ ಮೇಲೆ ಕನ್ನಡದ ಬಾವುಟ ಹಾರಿಸಿದ ಏಕೈಕ ಕನ್ನಡಿಗ ದೇವೇಗೌಡ ಅವರಿಂದ ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತು ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಬರೆದಿರುವ ‘ಮಣ್ಣಿನ ಮಗ ನಾನು ಕಂಡಂತೆ ಮತ್ತು ನಾಡು ಕಂಡಂತೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವೇಗೌಡ ಅವರು ತಮ್ಮ 60 ವರ್ಷದ ರಾಜಕಾರಣದಲ್ಲಿ ಅಧಿಕಾರ ಮಾಡಿದ ಅವಧಿ ಕಡಿಮೆ. ಹೆಚ್ಚಿನ ಸಮಯವನ್ನು ದೇಶ, ರಾಜ್ಯದ ಹಿತಕ್ಕಾಗಿ ಹೋರಾಟ ಮಾಡಿದ್ದಾರೆ. ಹಠ, ಛಲ, ಸವಾಲು ಸ್ವೀಕರಿಸುವ ಛಾತಿ ಅವರಲ್ಲಿದ್ದು ರೈತರ, ಕಾರ್ಮಿಕರ, ದುಡಿಯುವವರ ಪರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರದ್ದು ಕರ್ಣನ ವ್ಯಕ್ತಿತ್ವ ಎಂದು ಶ್ಲಾಘಿಸಿದರು.

ಸಣ್ಣ ವಯಸ್ಸಿನಲ್ಲೇ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ದೇವೇಗೌಡ ಅವರು, ಕೇವಲ 24 ಶಾಸಕರನ್ನು ಇಟ್ಟುಕೊಂಡು ಇಡೀ ಸರ್ಕಾರವನ್ನೇ ನಡುಗಿಸಿದ್ದರು. ನೀರಾವರಿ ಸಚಿವರಾಗಿ ಬಹುಪಯೋಗಿ ಕಾರ್ಯ ನಿರ್ವಹಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಅಹೋರಾತ್ರಿ ಸುದೀರ್ಘ ಸಭೆ ನಡೆಸಿದ ಹೆಗ್ಗಳಿಕೆ ಅವರದ್ದು. ನಾರಾಯಣಪುರ ಕಾಲುವೆ ನಿರ್ಮಾಣಕ್ಕೆ ವೇಗ ನೀಡಿದ್ದರು. ಬೆಂಗಳೂರಿಗೆ 9 ಟಿಎಂಸಿ ನೀರು ತರುವಲ್ಲಿ ದೇವೇಗೌಡ ಅವರು ಕಾರಣೀಕರ್ತರು ಎಂದು ಸ್ಮರಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ನೇರವಾಗಿ ಮುಂಬೈಗೆ ಹೋಗಿ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಮಾತನಾಡಿ, ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿದರು. ಅವರು ಪ್ರಧಾನಿಯಾದ ನಂತರ ಕೇಂದ್ರದಿಂದ ಎಐಬಿಪಿ ಯೋಜನೆ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಕೊಡಿಸಿದ್ದರು. ಇನ್ನು ಹಲವು ಪುಸ್ತಕಗಳನ್ನು ಬರೆಯುವಷ್ಟು ಅವರ ಬದುಕು ವಿಸ್ತಾರವಾಗಿದೆ ಎಂದರು.

ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಧಾನಮಂತ್ರಿಯಾಗಿ ಅಧಿಕಾರ ಅನುಭವಿಸಿದ ಅವಧಿ ಕಡಿಮೆ ಇರಬಹುದು. ಆದರೆ, ದೇವೇಗೌಡ ಅವರು ನಾಡಿಗೆ ಕೊಟ್ಟಿರುವ ಕಾಣಿಕೆ ಬಹುದೊಡ್ಡದು. ಅವರ ಜೀವನ ಚರಿತ್ರೆಯ ಈ ಕೃತಿ ರಾಜಕಾರಣಕ್ಕೆ ಬರುವವರು ಬದ್ಧತೆ, ಪ್ರಾಮಾಣಿಕತೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಕೈಪಿಡಿ ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್ತು ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ಎಚ್.ಡಿ.ದೇವೇಗೌಡ ಅವರ ಇಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಆದರೆ, ಇಂತಹ ನಿರ್ಧಾರಗಳನ್ನು ಅವರು ಪ್ರಧಾನಿಯಾಗಿದ್ದಾಗಲೇ ತೆಗೆದುಕೊಂಡಿದ್ದರೆ, ಇನ್ನೆರಡು ವರ್ಷಗಳ ಕಾಲ ಅಧಿಕಾರಿದಲ್ಲಿ ಮುಂದುವರೆಯುವ ಅವಕಾಶವಿತ್ತು. 1972 ರಿಂದ 1978 ರವರೆಗಿನ ಅವಧಿಯನ್ನು ‘ಬೆಸ್ಟ್ ಪಾರ್ಟ್ ಆಫ್ ಕರ್ನಾಟಕ ಅಸೆಂಬ್ಲಿ’ ಎನ್ನಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಹಂಪನಾಗರಾಜಯ್ಯ, ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಮಾತನಾಡಿದರು. ಮಾಜಿ ಸಚಿವೆ ಲೀಲಾದೇವಿ ಪ್ರಸಾದ್, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.